image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಶ್ಚಿಮ ಬಂಗಾಳ ಮಾದರಿಯಲ್ಲಿ ತಳಮಟ್ಟದ ಹೋರಾಟಕ್ಕೆ ಕರೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್

ಪಶ್ಚಿಮ ಬಂಗಾಳ ಮಾದರಿಯಲ್ಲಿ ತಳಮಟ್ಟದ ಹೋರಾಟಕ್ಕೆ ಕರೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್

ಬೆಂಗಳೂರು : ರಾಜ್ಯಕ್ಕೆ ಚೊಚ್ಚಲ ಅಧಿಕೃತ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಭಾನುವಾರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಜ್ಯ ನಾಯಕರ ಮಹತ್ವದ ಸಂಘಟನಾ ಸಭೆ ನಡೆಸಿದರು. ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ ಅವರು, ಮುಂಬರುವ ಚುನಾವಣೆಗಳನ್ನು ಎದುರಿಸಲು ಪಶ್ಚಿಮ ಬಂಗಾಳದ ಮಾದರಿಯಲ್ಲಿ ತಳಮಟ್ಟದಿಂದ ಸಂಘಟನೆ ಮತ್ತು ಬಲಿಷ್ಠ ಹೋರಾಟ ರೂಪಿಸುವಂತೆ ರಾಜ್ಯದ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ನಿತಿನ್ ನಬಿನ್ ನೇತೃತ್ವದಲ್ಲಿ ನಡೆದ ಈ ಸರಣಿ ಸಭೆಗಳಲ್ಲಿ ರಾಜ್ಯದ ಶಾಸಕರು, ಸಂಸದರು, ಎಂಎಲ್‌ಸಿಗಳು, ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರು ಪಾಲ್ಗೊಂಡಿದ್ದರು. ಪ್ರಸ್ತುತ ರಾಜ್ಯ ನಾಯಕರ ಹೋರಾಟದ ಸ್ವರೂಪದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ರಾಷ್ಟ್ರೀಯ ಅಧ್ಯಕ್ಷರು, ಕೇವಲ ಮಾಧ್ಯಮ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಸೀಮಿತವಾಗದೆ, ನಾಯಕರು ಮತ್ತು ಶಾಸಕರು ನೇರವಾಗಿ ಗ್ರೌಂಡ್ ಮಟ್ಟಕ್ಕೆ ಇಳಿದು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ವಿಧಾನಸಭೆಯ ಒಳಗಷ್ಟೇ ಅಲ್ಲದೆ, ಬೀದಿಗೆ ಬಂದು ಸರ್ಕಾರದ ವೈಫಲ್ಯಗಳ ವಿರುದ್ಧ ತೀವ್ರ ಆಂದೋಲನ ನಡೆಸಬೇಕು ಎಂದು ನಿರ್ದೇಶನ ನೀಡಿದರು.

ಮುಂದಿನ 2028ರ ವಿಧಾನಸಭಾ ಚುನಾವಣೆಯ ಗೆಲುವಿಗೆ ರೋಡ್‌ಮ್ಯಾಪ್ ರೂಪಿಸಿದ ನಬಿನ್, ನಾಳೆಯೇ ಚುನಾವಣೆ ಇದೆ ಎಂಬ ಗಂಭೀರತೆಯೊಂದಿಗೆ ಬೂತ್ ಮಟ್ಟ, ಶಕ್ತಿ ಕೇಂದ್ರ, ಮಂಡಲ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರನ್ನು ಸಕ್ರಿಯಗೊಳಿಸಬೇಕು ಎಂದರು. ವಿಶೇಷವಾಗಿ ಎಸ್‌ಐಆರ್ (ವೋಟರ್ ಲಿಸ್ಟ್ ಪರಿಷ್ಕರಣೆ) ಪ್ರಕ್ರಿಯೆಯನ್ನು ಚುನಾವಣೆಯಷ್ಟೇ ಪ್ರಾಮುಖ್ಯತೆಯೊಂದಿಗೆ ಪರಿಗಣಿಸಿ, ಅರ್ಹ ಮತದಾರರ ಹೆಸರು ಡಿಲೀಟ್ ಆಗದಂತೆ ಹಾಗೂ ಅನರ್ಹರು ಪಟ್ಟಿಯಲ್ಲಿ ಸೇರದಂತೆ ನಿಗಾವಹಿಸಲು ಸೂಚಿಸಿದರು. ಈ ಮೂಲಕ ಜಿಬಿಎ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಮುಂದಿನ ವಿಧಾನಸಭಾ ಚುನಾವಣೆ ಸುಲಭವಾಗಲಿದೆ ಎಂದು ಮಾರ್ಗದರ್ಶನ ನೀಡಿದರು. 

ನಿತಿನ್ ನಬಿನ್ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ದಂಡೇ ಉಪಸ್ಥಿತರಿದ್ದು, ಪ್ರಸ್ತುತ ರಾಜ್ಯ ರಾಜಕೀಯ ಸ್ಥಿತಿಗತಿ ಹಾಗೂ ಕಾಂಗ್ರೆಸ್ ಸರ್ಕಾರದ ಆಡಳಿತದ ಕುರಿತು ಔಪಚಾರಿಕ ಚರ್ಚೆ ನಡೆಸಲಾಯಿತು. ತದನಂತರ ಅವರು ಮಲ್ಲೇಶ್ವರದ ಪ್ರಸಿದ್ಧ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿಯು ತನ್ನ ಸದ್ಧಾಂತಿಕ ಬದ್ಧತೆ, ಕಠಿಣ ಪರಿಶ್ರಮ ಹಾಗೂ ನಿರಂತರ ಸಂವಾದದ ಕಾರಣದಿಂದಾಗಿಯೇ ಇಂದು ಶೂನ್ಯದಿಂದ 22 ರಾಜ್ಯಗಳಲ್ಲಿ ಅಧಿಕಾರ ನಡೆಸುವ ಮಟ್ಟಿಗೆ ಮತ್ತು 400ಕ್ಕೂ ಹೆಚ್ಚು ಸಂಸದರು, 2,000ಕ್ಕೂ ಹೆಚ್ಚು ಶಾಸಕರನ್ನು ಹೊಂದುವಷ್ಟು ಬೃಹತ್ ಆಗಿ ಬೆಳೆದಿದೆ ಎಂದು ನಬಿನ್ ನೆನಪಿಸಿದರು. ಈ ಹಿನ್ನೆಲೆಯಲ್ಲಿ ಶಾಸಕರು ಮತ್ತು ನಾಯಕರು ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತರೊಂದಿಗೆ ಆತ್ಮೀಯ ಸಂಬಂಧ ಕಾಯ್ದುಕೊಳ್ಳಬೇಕು, ನಿರಂತರ ಜನಸಂಪರ್ಕದಲ್ಲಿರಬೇಕು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಪರ ಹೋರಾಟಗಳನ್ನು ಮುನ್ನಡೆಸಬೇಕು ಎಂದು ಕಿವಿಮಾತು ಹೇಳಿದರು.

Category
ಕರಾವಳಿ ತರಂಗಿಣಿ