image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿಕ್ಕಮಗಳೂರು ಎಪಿಎಂಸಿಯಲ್ಲಿ ರೈತರಿಗೆ ಅನ್ಯಾಯ ಸಹಿಸಲಸಾಧ್ಯ: ಸಿ. ಟಿ. ರವಿ ಆಕ್ರೋಶ

ಚಿಕ್ಕಮಗಳೂರು ಎಪಿಎಂಸಿಯಲ್ಲಿ ರೈತರಿಗೆ ಅನ್ಯಾಯ ಸಹಿಸಲಸಾಧ್ಯ: ಸಿ. ಟಿ. ರವಿ ಆಕ್ರೋಶ

ಚಿಕ್ಕಮಗಳೂರು : ರೈತರನ್ನು ದೊಡ್ಡ ವ್ಯಾಪಾರಿಗಳ ಏಕಸ್ವಾಮ್ಯ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ರಕ್ಷಿಸುವ ಸಲುವಾಗಿಯೇ ಎಪಿಎಂಸಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಇಂತಹ ವ್ಯವಸ್ಥೆಯಲ್ಲೇ ರೈತರಿಗೆ ಅನ್ಯಾಯವಾಗುತ್ತಿದೆ ಎಂದರೆ ಅಮಾಯಕ ರೈತರು ಎಲ್ಲಿಗೆ ಹೋಗಬೇಕು ಮತ್ತು ಯಾರಲ್ಲಿ ನ್ಯಾಯ ಕೇಳಬೇಕು ಎಂದು ಬಿಜೆಪಿ ನಾಯಕ ಸಿ. ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಬೀನ್ಸ್ ಬೆಳೆದು, ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ ಇದೆ ಎಂದು ಸಂಭ್ರಮದಿಂದ ಎಪಿಎಂಸಿಗೆ ಬಂದ ರೈತರು ಇಂದು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದಿಸಿದ್ದಾರೆ.

ಮೈಸೂರು ಹಾಗೂ ಬೆಂಗಳೂರಿನ ಎಪಿಎಂಸಿಗಳಲ್ಲಿ ಬೀನ್ಸ್ ಇಂದು ಪ್ರತಿ ಕೆಜಿಗೆ 85 ರಿಂದ 90 ರೂಪಾಯಿಗೆ ಖರೀದಿಯಾಗುತ್ತಿದ್ದು, ಸಾಮಾನ್ಯ ಗ್ರಾಹಕರಿಗೆ 150 ರೂಪಾಯಿಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಆದರೆ, ಚಿಕ್ಕಮಗಳೂರಿನ ರೈತರು ತಮಗೂ ಉತ್ತಮ ಬೆಲೆ ಲಭಿಸಬಹುದು ಎನ್ನುವ ಸಂತೋಷದಿಂದ ಮಾರುಕಟ್ಟೆಗೆ ಬೀನ್ಸ್ ತಂದರೆ, ಇಲ್ಲಿನ ಮಧ್ಯವರ್ತಿಗಳು ಪ್ರತಿ ಕೆಜಿಗೆ ಕೇವಲ 35 ರಿಂದ 40 ರೂಪಾಯಿ ಬೆಲೆ ನಿಗದಿಪಡಿಸುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ರಕ್ಷಿಸಬೇಕಾದ ಎಪಿಎಂಸಿಯಲ್ಲೇ ಈ ರೀತಿಯ ಬಹಿರಂಗ ಸುಲಿಗೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರವು ಕುರ್ಚಿ ಕಿತ್ತಾಟ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅದಕ್ಕೆ ರೈತರ ಕುರಿತು ಸ್ವಲ್ಪವೂ ಕಾಳಜಿಯಿಲ್ಲ ಎಂದು ಸಿ. ಟಿ. ರವಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ ಕಬ್ಬು ಮತ್ತು ಭತ್ತ ಖರೀದಿ ಮಾಡದೆ ರೈತರನ್ನು ಬೀದಿಗಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆಯನ್ನು ರೈತರು ಇನ್ನೂ ಮರೆತಿಲ್ಲ. ಇಂದು ಮತ್ತೆ ತರಕಾರಿ ಬೆಳೆಗಾರರು ಬೀದಿಗಿಳಿಯುವ ಪರಿಸ್ಥಿತಿಯನ್ನು ಈ ಸರ್ಕಾರ ತಂದಿದೆ. ರೈತರ ಆಕ್ರೋಶಕ್ಕೆ ಕಾರಣವಾದ ಯಾವ ಸರ್ಕಾರವೂ ಉಳಿದ ಇತಿಹಾಸವಿಲ್ಲ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೂ ಇದೇ ಗತಿ ಬರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ರಾಜ್ಯದ ಎಲ್ಲ ಎಪಿಎಂಸಿಗಳಲ್ಲೂ ಸಮಾನ ಸ್ವರೂಪದ ಬೆಲೆಗೆ ತರಕಾರಿ ಖರೀದಿಯಾಗುವಂತೆ ಸರ್ಕಾರ ತಕ್ಷಣವೇ ಸೂಚನೆ ನೀಡಬೇಕು ಮತ್ತು ರೈತರ ನೆರವಿಗೆ ಧಾವಿಸಬೇಕು. ಮಧ್ಯವರ್ತಿಗಳು ಮನಬಂದಂತೆ ಬೆಲೆ ನಿಗದಿಪಡಿಸುವುದನ್ನು ತಡೆದು, ಅಧಿಕಾರಿಗಳು ಅತ್ತ ಗಮನ ಹರಿಸುವಂತೆ ತಕ್ಷಣವೇ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಈ ಸಮಸ್ಯೆಗೆ ತಕ್ಷಣವೇ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ವಿಫಲವಾದರೆ, ಮುಂದಿನ ದಿನಗಳಲ್ಲಿ ರೈತರ ಜೊತೆಗೂಡಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಿ. ಟಿ. ರವಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ