image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹಿಜಾಬ್ ಧರಿಸಲು ಅನುಮತಿ ನೀಡಿದ್ದಕ್ಕೆ ಸಮರ್ಥನೆ, ಕೇಸರಿ ಶಾಲಿಗೆ ನೋ ಎಂಟ್ರಿ: ಕೇಂದ್ರಕ್ಕೆ ಸಚಿವ ಮಧು ಬಂಗಾರಪ್ಪ ನೇರ ಸವಾಲು

ಹಿಜಾಬ್ ಧರಿಸಲು ಅನುಮತಿ ನೀಡಿದ್ದಕ್ಕೆ ಸಮರ್ಥನೆ, ಕೇಸರಿ ಶಾಲಿಗೆ ನೋ ಎಂಟ್ರಿ: ಕೇಂದ್ರಕ್ಕೆ ಸಚಿವ ಮಧು ಬಂಗಾರಪ್ಪ ನೇರ ಸವಾಲು

ಬೆಂಗಳೂರು : ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿಜಾಬ್ ಎಂಬುದು ಬಿಜೆಪಿಯವರಿಗೆ ರಾಜಕೀಯ ವಿಷಯ ಇರಬಹುದು, ಆದರೆ ನಮಗೆ ಅದು ಸಮಾನತೆಯ ಸಂಕೇತವಾಗಿದೆ. ಈ ವಿಚಾರದಲ್ಲಿ ನಮ್ಮ ಸರ್ಕಾರಕ್ಕೆ ಸಂಪೂರ್ಣ ಸ್ಪಷ್ಟತೆ ಇದೆ. ನಾವು ಚುನಾವಣಾ ಪ್ರಣಾಳಿಕೆಯಲ್ಲಿಯೇ ಈ ಭರವಸೆಯನ್ನು ನೀಡಿದ್ದೆವು. ರಾಜ್ಯದ ಜನರು ನಮಗೆ ಮತ ನೀಡಿ ಆಶೀರ್ವದಿಸಿದ್ದಾರೆ, ಆ ಕಾರಣಕ್ಕಾಗಿ ನಾವು ಜನರ ಋಣ ತೀರಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕೇಸರಿ ಶಾಲು ವಿಚಾರವಾಗಿ ಕಿಡಿಕಾರಿದ ಸಚಿವರು, ಬಿಜೆಪಿಯವರು ಮೊದಲು ಕೇಂದ್ರೀಯ ವಿದ್ಯಾಲಯದಲ್ಲಿ (ಕೆವಿ) ಯಾವ ನಿಯಮಗಳಿವೆ ಎಂಬುದನ್ನು ನೋಡಿಕೊಂಡು ಬರಲಿ. ತಾಕತ್ತಿದ್ದರೆ ಕೆವಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೊದಲು ಕೇಸರಿ ಶಾಲು ಹಾಕಿಸಿ ಕಳುಹಿಸಲಿ. ನಮ್ಮ ರಾಜ್ಯ ಸರ್ಕಾರದ ಶಾಲೆಗಳಲ್ಲಿ ಕೇಸರಿ ಶಾಲಿಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಯಾರಾದರೂ ಶಾಲಾ-ಕಾಲೇಜುಗಳಿಗೆ ಕೇಸರಿ ಶಾಲು ಧರಿಸಿ ಬಂದರೆ ಅವರ ವಿರುದ್ಧ ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಗಂಭೀರ ಎಚ್ಚರಿಕೆ ನೀಡಿದರು.

ಇನ್ನು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ನೀಟ್ ಯುಜಿ (NEET UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ವಿರುದ್ಧ ಸಚಿವರು ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರಕ್ಕೆ ಒಂದು ದೇಶ ಮಟ್ಟದ ಪರೀಕ್ಷೆಯನ್ನು ಸರಿಯಾಗಿ ನಡೆಸುವ ಯೋಗ್ಯತೆ ಇಲ್ಲ. ಕಳೆದ ಮೂರು ವರ್ಷಗಳಿಂದ ನನ್ನ ಇಲಾಖೆಯಲ್ಲಿ ಒಂದೇ ಒಂದು ಪ್ರಶ್ನೆ ಪತ್ರಿಕೆ ಕೂಡ ಸೋರಿಕೆಯಾಗಿಲ್ಲ. ಆದರೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆಯಾದಾಗ ಅದಕ್ಕೆ ಉತ್ತರ ಕೊಡಲಾಗದೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಂದು ವಾರ ಕಾಲ ಓಡಿ ಹೋಗಿ ಅಡಗಿಕೊಂಡಿದ್ದರು ಎಂದು ಲೇವಡಿ ಮಾಡಿದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನನ್ನ ಬಳಿ ಬರಲಿ, ಯಾವುದೇ ಸೋರಿಕೆ ಇಲ್ಲದೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆಯನ್ನು ಹೇಗೆ ನಡೆಸಬೇಕು ಎಂಬುದನ್ನು ನಾನೇ ಅವರಿಗೆ ಕೇವಲ ಒಂದೇ ವಾರದಲ್ಲಿ ಹೇಳಿಕೊಟ್ಟು, ತಿಳುವಳಿಕೆ ಮೂಡಿಸುತ್ತೇನೆ ಎಂದು ಸವಾಲು ಹಾಕಿದರು. ನೀಟ್ ಪರೀಕ್ಷೆ ಬರೆಯುವವರಲ್ಲಿ ಶೇಕಡಾ 96 ರಷ್ಟು ಹಿಂದುಳಿದ ವರ್ಗಗಳ ಮಕ್ಕಳಿದ್ದಾರೆ. ಅವರ ಭವಿಷ್ಯದ ಜೊತೆ ಆಟವಾಡುತ್ತಿರುವ ಬಿಜೆಪಿಯವರು ಆ ಮಕ್ಕಳ ಕಾಲ ಕೆಳಗೆ ನಲುಗುವಂತಾದಾಗಲಾದರೂ ಅವರಿಗೆ ಬುದ್ಧಿ ಬರಬಹುದು ಎಂದು ಮಧು ಬಂಗಾರಪ್ಪ ಅವರು ಬೆಂಗಳೂರಿನಲ್ಲಿ ಗುಡುಗಿದ್ದಾರೆ.

Category
ಕರಾವಳಿ ತರಂಗಿಣಿ