image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಶಂಕೆ: ತೀವ್ರ ತಪಾಸಣೆ ನಡೆಸಿ ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಬಿಡುಗಡೆ ಮಾಡಿದ ಪೊಲೀಸ್

ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಶಂಕೆ: ತೀವ್ರ ತಪಾಸಣೆ ನಡೆಸಿ ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಬಿಡುಗಡೆ ಮಾಡಿದ ಪೊಲೀಸ್

ಬೆಳಗಾವಿ : ನಗರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಪ್ರವೇಶಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಹೈ ಅಲರ್ಟ್‌ ಘೋಷಿಸಿ ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಲವರ ತಪಾಸಣೆಯಾಗಿದ್ದು, ಮೂರು ಬಸ್‌ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಬೆಳಗಾವಿ ನಗರಕ್ಕೆ ಬಂದಿದ್ದಾರೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ನೇತೃತ್ವದ ತಂಡವು ಅನುಮಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಆದ ಡಿಸಿಪಿ ನಾರಾಯಣ ಭರಮನಿ ನೇತೃತ್ವದ ಪೊಲೀಸ್ ತಂಡವು ತಕ್ಷಣವೇ ಬೆಳಗಾವಿ ಹೃದಯ ಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಮಾಳಮಾರುತಿ ಪೊಲೀಸ್ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿತು.

ವಿಚಾರಣೆ ವೇಳೆ ವಶಕ್ಕೆ ಒಳಗಾದ ಕಾರ್ಮಿಕರು, ತಾವು ಬಾಂಗ್ಲಾದೇಶದವರಲ್ಲ, ಪಶ್ಚಿಮ ಬಂಗಾಳ ಮೂಲದವರಾಗಿದ್ದು ಶಹಾಪುರದಲ್ಲಿ ಅಕ್ಕಸಾಲಿಗರಾಗಿ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮತದಾನ ಇದ್ದಿದ್ದರಿಂದ ಊರಿಗೆ ಹೋಗಿದ್ದು, ಈಗ ವಾಪಸ್ ಕೆಲಸಕ್ಕೆ ಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಪಿ ನಾರಾಯಣ ಭರಮನಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಮಿಕರ ಮೊಬೈಲ್ ಸಂಖ್ಯೆಗಳು, ಆಧಾರ್ ಕಾರ್ಡ್‌ಗಳು ಮತ್ತು ವೋಟರ್ ಐಡಿಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲವೂ ಅಸಲಿ ದಾಖಲೆಗಳೆಂದು ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚಿನ ಸುರಕ್ಷತೆಗಾಗಿ ಎಲ್ಲರ ಹೆಬ್ಬೆರಳ ಗುರುತುಗಳನ್ನು ಪಡೆದುಕೊಳ್ಳಲಾಗಿದೆ. ಸದ್ಯ ಯಾವುದೇ ಅಧಿಕೃತ ತಾಂತ್ರಿಕ ದೋಷ ಕಂಡು ಬರದ ಕಾರಣ, ವಿಚಾರಣೆಯ ನಂತರ ಆ ಎಲ್ಲಾ ಕಾರ್ಮಿಕರನ್ನು ಅವರವರ ನಿವಾಸ ಹಾಗೂ ಕೆಲಸದ ಸ್ಥಳಗಳಿಗೆ ವಾಪಸ್ ಕಳುಹಿಸಿಕೊಡಲಾಗಿದೆ. ಆದರೆ, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈ ದಾಖಲೆಗಳು ನಕಲಿಯೇ ಎಂಬ ಬಗ್ಗೆ ಆಂತರಿಕ ಪರಿಶೀಲನೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ