image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನ ಸೂರ್ಯನಗರದಲ್ಲಿ ದೇಶದ ಎರಡನೇ ಅತಿ ದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅದ್ಧೂರಿ ಶಂಕುಸ್ಥಾಪನೆ

ಬೆಂಗಳೂರಿನ ಸೂರ್ಯನಗರದಲ್ಲಿ ದೇಶದ ಎರಡನೇ ಅತಿ ದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅದ್ಧೂರಿ ಶಂಕುಸ್ಥಾಪನೆ

ಬೆಂಗಳೂರು : ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ 4ನೇ ಹಂತದಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಶನಿವಾರ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಭವಿಷ್ಯದಲ್ಲಿ ನಗರದ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರಮುಖ ಪರ್ಯಾಯ ಆಯ್ಕೆಯಾಗಿ ಈ ನೂತನ ಕ್ರೀಡಾಂಗಣವನ್ನು ರೂಪಿಸಲಾಗುತ್ತಿದ್ದು, ಇನ್ನೆರಡು ವರ್ಷಗಳ ಅವಧಿಯಲ್ಲಿ ಇದು ಕ್ರೀಡಾಭಿಮಾನಿಗಳ ಲೋಕಾರ್ಪಣೆಗೆ ಸಿದ್ಧಗೊಳ್ಳಲಿದೆ.

ಸುಮಾರು 70 ರಿಂದ 75 ಎಕರೆ ವಿಸ್ತಾರವಾದ ಜಾಗದಲ್ಲಿ ಬರೋಬ್ಬರಿ 900 ಕೋಟಿಗೂ ಅಧಿಕ ರೂಪಾಯಿ ಭಾರಿ ವೆಚ್ಚದಲ್ಲಿ ಈ ಹೈಟೆಕ್ ಸ್ಟೇಡಿಯಂ ತಲೆಯೆತ್ತುತ್ತಿದೆ. ಒಟ್ಟು 80 ಸಾವಿರ ಆಸನಗಳ ಬೃಹತ್ ಸಾಮರ್ಥ್ಯ ಹೊಂದಲಿರುವ ಈ ಕ್ರೀಡಾಂಗಣವು ಸಿದ್ಧಗೊಂಡ ನಂತರ ಇಡೀ ದೇಶದಲ್ಲೇ ಎರಡನೇ ಅತಿ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯ 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಭಾರತದ ಅತಿ ದೊಡ್ಡ ಸ್ಟೇಡಿಯಂ ಆಗಿ ಅಗ್ರಸ್ಥಾನದಲ್ಲಿದೆ.

ಈ ನೂತನ ಅಂತಾರಾಷ್ಟ್ರೀಯ ಕ್ರೀಡಾಂಗಣವು ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿರದೆ, ಬಹುಮುಖಿ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಗೊಳ್ಳಲಿದೆ. ಇದರ ಒಳಾಂಗಣದಲ್ಲಿ (ಇಂಡೋರ್) ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ವಾಲಿಬಾಲ್, ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಸ್ಕ್ಯಾಷ್, ಕಬಡ್ಡಿ, ಖೋ-ಖೋ, ಜುಡೋ, ಟೈಕ್ವಾಂಡೋ, ಕುಸ್ತಿ ಹಾಗೂ ಫೆನ್ಸಿಂಗ್ ಆಟಗಳ ಅತ್ಯಾಧುನಿಕ ಕೋರ್ಟ್‌ಗಳು ಲಭ್ಯವಿರಲಿವೆ. ಇನ್ನು ಹೊರಾಂಗಣದಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಸೇರಿದಂತೆ ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ಪಾಡೆಲ್ ಮತ್ತು ಪಿಕಲ್‌ಬಾಲ್ ಆಟಗಳಿಗೆ ಪ್ರತ್ಯೇಕ ಅಂಕಣಗಳನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ಹಾಗೂ ಹೈ-ಡೈವಿಂಗ್ ಪೂಲ್ ಸೌಲಭ್ಯ ಕೂಡ ಇಲ್ಲಿರಲಿದೆ.

ಬೃಹತ್ ಜನಸಮೂಹವನ್ನು ಅತ್ಯಂತ ಸುಲಭವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸ್ಟೇಡಿಯಂ ಸುತ್ತಲೂ ವಿಶಾಲವಾದ ಸ್ಥಳಾವಕಾಶ ಕಲ್ಪಿಸಲಾಗುತ್ತಿದ್ದು, ಏಕಕಾಲದಲ್ಲಿ 500ಕ್ಕೂ ಅಧಿಕ ವಾಹನಗಳನ್ನು ನಿಲುಗಡೆ ಮಾಡಲು ಸುಸಜ್ಜಿತ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣವಾಗಲಿದೆ. ವಾಣಿಜ್ಯ ಮಳಿಗೆಗಳು, ಸುಸಜ್ಜಿತ ಕ್ರೀಡಾ ಪರಿಕರಗಳ ಅಂಗಡಿಗಳು, ವಿಶಾಲವಾದ ಉಪಹಾರ ಗೃಹಗಳು ಸೇರಿದಂತೆ ಆಟಗಾರರು ಮತ್ತು ಕ್ರೀಡಾ ಸಿಬ್ಬಂದಿ ವಾಸ್ತವ್ಯ ಹೂಡಲು ಹೈಟೆಕ್ ವಸತಿ ಗೃಹಗಳ ವ್ಯವಸ್ಥೆ ಇರಲಿದೆ. ವಿವಿಐಪಿಗಳ ತುರ್ತು ಆಗಮನಕ್ಕಾಗಿ ಹೆಲಿಪ್ಯಾಡ್ ಸೌಲಭ್ಯ ಹಾಗೂ ಕ್ರೀಡಾಂಗಣದ ಸುತ್ತಲೂ ಕಣ್ಣಿಗೆ ತಂಪು ನೀಡುವ ಆಕರ್ಷಕ ಹಸಿರು ವಲಯವನ್ನು ನಿರ್ಮಿಸಲು ಯೋಜಿಸಲಾಗಿದೆ.

ಈ ಐತಿಹಾಸಿಕ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಸಾಕ್ಷಿಯಾದರು. ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಸರ್ಕಾರಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಾಸಕ ಬಿ. ಶಿವಣ್ಣ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಕೆಹೆಚ್‌ಬಿ ಅಧ್ಯಕ್ಷ ಶಿವಲಿಂಗೇಗೌಡ ಅವರು ಕಳೆದ ಒಂದು ವಾರದಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದರು.

ಗುದ್ದಲಿ ಪೂಜೆಯ ನಂತರ ನಡೆದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಆಗಮಿಸಿದ ಗಣ್ಯರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ 'ನಮ್ಮ ಮನೆ' ಯೋಜನೆಗೆ ಅಧಿಕೃತ ಚಾಲನೆ ನೀಡಲಾಯಿತು. ಇದರೊಂದಿಗೆ 'ಸೂರ್ಯ ಶೈನ್' ಮತ್ತು 'ಸೂರ್ಯ ಡಿವೈನ್' ಹೆಸರಿನ ಅತ್ಯಾಧುನಿಕ ವಸತಿ ಸಮುಚ್ಚಯಗಳ ಶಂಕುಸ್ಥಾಪನೆಯನ್ನೂ ನೆರವೇರಿಸಲಾಯಿತು. ವಸತಿ ಯೋಜನೆಗಾಗಿ ತಮ್ಮ ಅತ್ಯಮೂಲ್ಯ ಭೂಮಿ ನೀಡಿದ ರೈತರಿಗೆ ಸಾಂಕೇತಿಕವಾಗಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಸ್ತಾಂತರಿಸಲಾಯಿತು. ಅಲ್ಲದೆ, ಪಾರದರ್ಶಕ ಲಾಟರಿ ಪ್ರಕ್ರಿಯೆಯ ಮೂಲಕ ಅರ್ಹ ಅರ್ಜಿದಾರರಿಗೆ ನಿವೇಶನಗಳ ಹಂಚಿಕೆ ಪತ್ರಗಳನ್ನು ವಿತರಿಸಲಾಯಿತು.

Category
ಕರಾವಳಿ ತರಂಗಿಣಿ