image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಬೋಲಾ ಆತಂಕ; ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ

ಎಬೋಲಾ ಆತಂಕ; ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ

ಬೆಂಗಳೂರು : ಆಫ್ರಿಕಾ ಖಂಡದ ದೇಶಗಳಲ್ಲಿ ಇಬೋಲಾ ವೈರಸ್ ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯಾದ್ಯಂತ ತೀವ್ರ ನಿಗಾವಹಿಸಿದ್ದು, ಸಾರ್ವಜನಿಕ ಮುನ್ನೆಚ್ಚರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾ ದೇಶಗಳಲ್ಲಿ ಇಬೋಲಾ ತೀವ್ರವಾಗಿ ಹರಡುತ್ತಿರುವುದನ್ನು ಗಮನಿಸಿ, ಇದನ್ನು "ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ" ಎಂದು ಘೋಷಿಸಿದೆ. ಸದ್ಯಕ್ಕೆ ಭಾರತದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲದಿದ್ದರೂ, ಅಂತರರಾಷ್ಟ್ರೀಯ ಪ್ರಯಾಣ ಮತ್ತು ವ್ಯಾಪಾರ ವಹಿವಾಟುಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರವು ಈಗಿನಿಂದಲೇ ಸನ್ನದ್ಧವಾಗಿದೆ.

ಇಬೋಲಾ ಅತ್ಯಂತ ಗಂಭೀರ ಸ್ವರೂಪದ ವೈರಲ್ ಸೋಂಕಾಗಿದ್ದು, ಬಾಧಿತರಲ್ಲಿ ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ಗಂಟಲು ನೋವು, ವಾಂತಿ, ತೀವ್ರ ಅತಿಸಾರ, ಹೊಟ್ಟೆ ನೋವು, ಚರ್ಮದ ಮೇಲೆ ದದ್ದುಗಳು ಏಳುವುದು ಹಾಗೂ ಕಣ್ಣು ಕೆಂಪಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕಿತ ವ್ಯಕ್ತಿಗಳ ರಕ್ತ, ದೇಹದ ಅಂಗಗಳು, ಅಥವಾ ಶಾರೀರಿಕ ದ್ರವಗಳೊಂದಿಗೆ (ಲಾಲಾರಸ, ಬೆವರು ಇತ್ಯಾದಿ) ನೇರ ಸಂಪರ್ಕ ಹೊಂದುವುದರಿಂದ ಹಾಗೂ ಸೋಂಕಿತರು ಬಳಸಿದ ಹಾಸಿಗೆ, ಬಟ್ಟೆ, ಸಿರಿಂಜ್‌ನಂತಹ ಕಲುಷಿತ ವಸ್ತುಗಳನ್ನು ಮುಟ್ಟುವುದರಿಂದ ಈ ರೋಗ ಹರಡುತ್ತದೆ. ಹೀಗಾಗಿ, ಸೋಂಕಿತರನ್ನು ಉಪಚರಿಸುವ ಆರೋಗ್ಯ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರು ಹೆಚ್ಚಿನ ಅಪಾಯದ ವಲಯದಲ್ಲಿದ್ದಾರೆ.

ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದು, ಐಡಿಎಸ್‌ಪಿ ಅಡಿಯಲ್ಲಿ ಶಂಕಿತ ಪ್ರಕರಣಗಳ ಮೇಲೆ ಕರಾರುವಾಕ್ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣಗಳು ಹಾಗೂ ಪ್ರಮುಖ ಪ್ರವೇಶ ಕೇಂದ್ರಗಳಲ್ಲಿ ಪ್ರಯಾಣಿಕರ ನಿಗಾ ವಹಿಸಲಾಗುತ್ತಿದ್ದು, ಪ್ರತ್ಯೇಕ ಕ್ವಾರಂಟೈನ್, ಐಸೋಲೇಷನ್ ವಾರ್ಡ್‌ಗಳು ಹಾಗೂ ರೆಫರಲ್ ಆಂಬುಲೆನ್ಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ. ಆರೋಗ್ಯ ರಕ್ಷಣಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಅಗತ್ಯ ವೈಯಕ್ತಿಕ ರಕ್ಷಣಾ ಪರಿಕರಗಳು (PPE Kits), ಔಷಧಿಗಳು ಮತ್ತು ಪ್ರಯೋಗಾಲಯ ಸೌಲಭ್ಯಗಳನ್ನು ಕಾಯ್ದಿರಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ತ್ವರಿತ ಪ್ರತಿಕ್ರಿಯಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಸೋಂಕಿನ ಲಕ್ಷಣಗಳು ಕಂಡುಬರುವವರ ವೀಕ್ಷಣೆ ಮತ್ತು ಚಿಕಿತ್ಸೆಗಾಗಿ ಬೆಂಗಳೂರಿನ ಎಪಿಡೆಮಿಕ್ ಡಿಸೀಸ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವಾಗಿ ಹಾಗೂ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯನ್ನು ಐಸೋಲೇಷನ್ ಮತ್ತು ಚಿಕಿತ್ಸಾ ಕೇಂದ್ರವಾಗಿ ಗುರುತಿಸಲಾಗಿದೆ. ಅದೇ ರೀತಿ ಮಂಗಳೂರಿನ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವಾಗಿ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯನ್ನು ಐಸೋಲೇಷನ್ ಮತ್ತು ಚಿಕಿತ್ಸಾ ಕೇಂದ್ರವಾಗಿ ಸಜ್ಜುಗೊಳಿಸಲಾಗಿದೆ. ಶಂಕಿತ ರೋಗಿಗಳ ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ 'ಎನ್‌ಐವಿ' ಕೇಂದ್ರದ ಮೂಲಕ ತಪಾಸಣೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿಕೊಡಲು ಸುರಕ್ಷಿತ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ಯಾವುದೇ ರೀತಿಯ ಅನಗತ್ಯ ಆತಂಕಕ್ಕೆ ಒಳಗಾಗಬಾರದು ಮತ್ತು ಕೇವಲ ಅಧಿಕೃತ ಮಾಹಿತಿಗಳನ್ನಷ್ಟೇ ನಂಬಬೇಕು ಎಂದು ಇಲಾಖೆ ವಿನಂತಿಸಿದೆ. ಇತ್ತೀಚೆಗೆ ಇಬೋಲಾ ಪೀಡಿತ ದೇಶಗಳಿಗೆ ಪ್ರಯಾಣ ಬೆಳೆಸಿ ಭಾರತಕ್ಕೆ ಮರಳಿರುವ ಪ್ರಯಾಣಿಕರು ಕಡ್ಡಾಯವಾಗಿ 21 ದಿನಗಳ ಕಾಲ ಸ್ವಯಂ ಆರೋಗ್ಯ ಮೇಲ್ವಿಚಾರಣೆ ಹಾಗೂ ಪ್ರತ್ಯೇಕ ವೀಕ್ಷಣೆಯಲ್ಲಿ ಇರಬೇಕು. ಈ ಅವಧಿಯಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Category
ಕರಾವಳಿ ತರಂಗಿಣಿ