ಚಿಕ್ಕಮಗಳೂರು : ಭಾರತೀಯ ಜನತಾ ಪಾರ್ಟಿಗೆ ಅಧಿಕಾರ ಹಿಡಿಯುವುದು ಅಂತಿಮ ಗುರಿಯಲ್ಲ, ಅದೊಂದು ಸಮಾಜ ಬದಲಾವಣೆಯ ಸಾಧನ ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರತಿಪಾದಿಸಿದರು. ಲಿಂಗದಹಳ್ಳಿಯ ಪ್ರಕೃತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ ಅಂಗವಾಗಿ ನಡೆದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 'ರಾಷ್ಟ್ರ ಮೊದಲು' ಎಂಬ ಸಿದ್ಧಾಂತದ ಅಡಿಯಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನ ಸಬಲೀಕರಣಕ್ಕಾಗಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಜಗತ್ತಿನ ಇತರ ದೇಶಗಳು ತಮ್ಮ ಸ್ವಹಿತಾಸಕ್ತಿ ಹಾಗೂ ಸ್ವಂತ ಪ್ರಜೆಗಳ ಯೋಗಕ್ಷೇಮವನ್ನು ಮಾತ್ರ ಬಯಸಿದರೆ, ಇಡೀ ವಿಶ್ವಕ್ಕೆ 'ಸರ್ವೇ ಜನಾಃ ಸುಖಿನೋ ಭವಂತು' ಮತ್ತು 'ವಸುಧೈವ ಕುಟುಂಬಕಂ' ಎಂಬ ಮಂತ್ರವನ್ನು ಕೊಟ್ಟ ಹೆಮ್ಮೆಯ ಭೂಮಿ ಭಾರತವಾಗಿದೆ. ನಮ್ಮ ಪ್ರತಿ ಪೂಜೆ ಮತ್ತು ಪ್ರಾರ್ಥನೆಯ ಅಂತಿಮ ಆಶಯವೇ ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸುವುದಾಗಿದೆ. ಭಾರತ ವಿಶ್ವಗುರುವಾಗಬೇಕಿರುವುದು ಜಗತ್ತಿನ ಮೇಲೆ ದಬ್ಬಾಳಿಕೆ ನಡೆಸಲು ಅಥವಾ ಜಾಗತಿಕ ಪೊಲೀಸ್ ಆಗಲು ಅಲ್ಲ, ಬದಲಿಗೆ ಜಗತ್ತಿನ ಕಲ್ಯಾಣಕ್ಕಾಗಿ ಆಗಿದೆ. ಹಿಂದೆ ಭಾರತ ತನ್ನ ಸಂಸ್ಕೃತಿಯ ಸುಗಂಧವನ್ನು ಪಸರಿಸಿ ಜಗತ್ತನ್ನು ಉದ್ಧರಿಸುವ ಕೆಲಸ ಮಾಡಿತ್ತು, ಈಗ ಅದರ ಸೈದ್ಧಾಂತಿಕ ಪುನರುತ್ಥಾನದ ಕಾರ್ಯ ನಡೆಯುತ್ತಿದೆ ಎಂದರು.
ಕೇವಲ ರಾಜಕೀಯ ಅಧಿಕಾರದ ಬದಲಾವಣೆ ನಮ್ಮ ಉದ್ದೇಶವಲ್ಲ, ನಮಗೆ ಸಾಮಾಜಿಕ ಬದಲಾವಣೆಯ ದೊಡ್ಡ ಹಂಬಲವಿದೆ. ಅಸ್ಪೃಶ್ಯತೆ ಮತ್ತು ಜಾತೀಯತೆಯಿಂದ ಮುಕ್ತವಾದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಆರ್ಥಿಕ ಬದಲಾವಣೆಯು ಕೇವಲ ಕೆಲವೇ ವ್ಯಕ್ತಿಗಳ ಕೈಯಲ್ಲಿ ಶ್ರೀಮಂತಿಕೆ ಕೇಂದ್ರಿಕೃತವಾಗುವುದಲ್ಲ, ಅದು ಸರ್ವವ್ಯಾಪಿಯಾಗಬೇಕು. ಪ್ರತಿಯೊಬ್ಬ ಭಾರತೀಯನೂ ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು 'ಆತ್ಮನಿರ್ಭರ ಭಾರತ' ಪರಿಕಲ್ಪನೆ ತಂದಿದ್ದಾರೆ. ಸರ್ಕಾರದ 'ಅಂತ್ಯೋದಯ' ಯೋಜನೆಗಳು ಸಮಾಜದ ಕಡೆಯ ವ್ಯಕ್ತಿಗೂ ಶಕ್ತಿ ತುಂಬುತ್ತಿವೆ ಎಂದು ವಿವರಿಸಿದರು.
ಕೆಲವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕರ್ನಾಟಕದ ನೆಲವನ್ನು ರಾಷ್ಟ್ರೀಯತೆಯ ವಿರುದ್ಧ ಎತ್ತಿಕಟ್ಟುವ ಅಖಾಡವಾಗಿ ಪರಿವರ್ತಿಸಲು ಸಂಚು ರೂಪಿಸುತ್ತಿದ್ದಾರೆ. ಇದಕ್ಕೆ ಈ ಪುಣ್ಯಭೂಮಿ ಎಂದಿಗೂ ಅವಕಾಶ ನೀಡಬಾರದು. ನಮ್ಮ ನಾಡಗೀತೆಯ ಮೊದಲ ಸಾಲೇ 'ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ' ಎಂದು ಸ್ಪಷ್ಟಪಡಿಸುತ್ತದೆ. ತಾಯಿ ಭಾರತೀಯ ಮಗಳೇ ಕರ್ನಾಟಕ ಮಾತೆ. ಹೀಗಿರುವಾಗ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯ ನಡುವೆ ಹುಳಿ ಹಿಂಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಪ್ರಾದೇಶಿಕ ಗೌರವವನ್ನು ಉಳಿಸಿಕೊಂಡೇ ರಾಷ್ಟ್ರೀಯ ಏಕತೆ ಕಾಯ್ದುಕೊಳ್ಳುವುದು ನಮ್ಮ ಆದ್ಯತೆಯಾಗಿದ್ದು, ನಮಗೆ ಜಾತಿಯಾಗಲಿ, ಅಧಿಕಾರವಾಗಲಿ ಮೊದಲಲ್ಲ, 'ರಾಷ್ಟ್ರವೇ ಮೊದಲು' ಎಂದು ಸ್ಪಷ್ಟಪಡಿಸಿದರು.
ಇಂದು ಬಿಜೆಪಿ 16 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ದೇಶದಲ್ಲಿ ಅತಿ ಹೆಚ್ಚು ಸಂಸದರು, 1800ಕ್ಕೂ ಹೆಚ್ಚು ಶಾಸಕರು ಹಾಗೂ ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಹೆಗ್ಗಳಿಕೆ ನಮ್ಮದಾಗಿದೆ. ಆರಂಭದಲ್ಲಿ ರಾಜಕೀಯ ಪಂಡಿತರಿಂದ ಉಪೇಕ್ಷೆಗೆ ಒಳಗಾಗಿದ್ದ ಪಕ್ಷ, ಇಂದು ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಸೈದ್ಧಾಂತಿಕ ಆಂದೋಲನದ ಮೂಲಕ ಹಂತ ಹಂತವಾಗಿ ಬೆಳೆದು ನಿಂತಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಗಂಗಾಸಾಗರ ವಿಧಾನಸಭಾ ಕ್ಷೇತ್ರವನ್ನು ಪಕ್ಷ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಗಂಗೋತ್ರಿಯಿಂದ ಗಂಗಾ ಸಾಗರದ ತನಕ ಬಿಜೆಪಿ ವ್ಯಾಪಿಸಿದೆ ಎಂದಿದ್ದಾರೆ ಎಂದು ಅವರು ಸ್ಮರಿಸಿದರು.
ನಾವು ಹಳೆಯ ಕಾರ್ಯಕರ್ತರೇ ಇರಬಹುದು, ನಮಗೆ ಎಲ್ಲವೂ ತಿಳಿದಿರಬಹುದು. ಆದರೆ ಸುಸ್ಥಿತಿಯಲ್ಲಿರುವ ಕಾರನ್ನು ಸಹ ಪ್ರತಿ 5,000 ಅಥವಾ 10,000 ಕಿಲೋಮೀಟರ್‌ಗೆ ಹೇಗೆ ಸರ್ವಿಸ್‌ಗೆ ಕಳುಹಿಸುತ್ತೇವೆಯೋ, ಹಾಗೆಯೇ ಈ ಕಾರ್ಯಾಗಾಗಳು ನಮಗೆ 'ಸೈದ್ಧಾಂತಿಕ ಸರ್ವಿಸಿಂಗ್' ಇದ್ದಂತೆ. ನಾವು ಯಾವ ಉದ್ದೇಶಕ್ಕಾಗಿ ರಾಜಕೀಯಕ್ಕೆ ಬಂದಿದ್ದೇವೆ ಎಂಬ ಬದ್ಧತೆಯನ್ನು ಮರುಸ್ಥಾಪಿಸಿಕೊಳ್ಳಲು ಇಂತಹ ಪ್ರಕ್ರಿಯೆಗಳು ಅತ್ಯಗತ್ಯ. ಶಿಕ್ಷಣ ಕ್ಷೇತ್ರದಲ್ಲೂ ಭಾರತೀಯತೆಯನ್ನು ಒಳಗೊಂಡ, ಜಾಗತಿಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿರುವ ಶಿಕ್ಷಣ ವ್ಯವಸ್ಥೆ ಬರಬೇಕಿದೆ ಎಂದು ಅವರು ಆಶಿಸಿದರು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್, ಜಿಲ್ಲಾಧ್ಯಕ್ಷರಾದ ಎಂ.ಆರ್ ದೇವರಾಜ್ ಶೆಟ್ಟಿ, maaji ಶಾಸಕರಾದ ಬೆಳ್ಳಿ ಪ್ರಕಾಶ್, ಡಿ.ಎಸ್ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ನರೇಂದ್ರ, ಪುಣ್ಯಪಾಲ್ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.