image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ 'ಅಂತರ್ಜಲ' ಪ್ರತ್ಯೇಕ ಅಧ್ಯಾಯ ಸೇರ್ಪಡೆಗೆ ಕೇಂದ್ರಕ್ಕೆ ಸಚಿವ ಎನ್‌.ಎಸ್‌.ಬೋಸರಾಜು ಪತ್ರ

ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ 'ಅಂತರ್ಜಲ' ಪ್ರತ್ಯೇಕ ಅಧ್ಯಾಯ ಸೇರ್ಪಡೆಗೆ ಕೇಂದ್ರಕ್ಕೆ ಸಚಿವ ಎನ್‌.ಎಸ್‌.ಬೋಸರಾಜು ಪತ್ರ

ಬೆಂಗಳೂರು: ಹವಾಮಾನ ಬದಲಾವಣೆ ಮತ್ತು ಅಂತರ್ಜಲದ ಅತಿಯಾದ ಬಳಕೆಯಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಜಲಕ್ಷಾಮವನ್ನು ತಪ್ಪಿಸಲು ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ಪಠ್ಯಕ್ರಮದಲ್ಲಿ ಅಂತರ್ಜಲದ (Groundwater) ಕುರಿತು ಪ್ರತ್ಯೇಕ ಅಧ್ಯಾಯವನ್ನು ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌.ಬೋಸರಾಜು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಪ್ರಸ್ತುತ ಎನ್‌ಸಿಇಆರ್‌ಟಿ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ (Contemporary India II) 'ಜಲ ಸಂಪನ್ಮೂಲಗಳು' ಎಂಬ ಅಧ್ಯಾಯವಿದ್ದರೂ, ಅದರಲ್ಲಿ ಕೇವಲ ಮೇಲ್ಮೈ ಜಲಕ್ಕೆ (Surface Water) ಮಾತ್ರ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ, ಭೂಮಿಯ ಮೇಲಿರುವ ಒಟ್ಟು ದ್ರವರೂಪದ ಸಿಹಿನೀರಿನಲ್ಲಿ ಶೇ. 97ರಷ್ಟು ಪಾಲು ಅಂತರ್ಜಲದ ರೂಪದಲ್ಲಿದೆ ಎಂದು ಅವರು ವಿವರಿಸಿದ್ದಾರೆ. ದೇಶದ ಶೇ. 50ರಷ್ಟು ಗೃಹಬಳಕೆ ಹಾಗೂ ಶೇ. 25ರಷ್ಟು ಕೃಷಿ ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಲಾಗಿದೆ. ಪ್ರತಿ ವರ್ಷ ನೀರಿನ ಬಳಕೆಯು ಶೇ. 1ರಷ್ಟು ಹೆಚ್ಚಾಗುತ್ತಿದ್ದು, ಹವಾಮಾನ ಬದಲಾವಣೆಯಿಂದಾಗಿ ಮೇಲ್ಮೈ ಜಲದ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ಅಂತರ್ಜಲದ ಮೇಲಿನ ಅವಲಂಬನೆ ಇನ್ನಷ್ಟು ತೀವ್ರವಾಗಲಿದೆ. ಅಲ್ಲದೇ, ಕಳೆದ ಎರಡು ದಶಕಗಳಲ್ಲಿ ಅತಿ-ಬಳಕೆಯ (Over-Exploited) ಮತ್ತು ಅಪಾಯಕಾರಿ ಮಟ್ಟದಲ್ಲಿರುವ (Critical & Semi-Critical) ಅಂತರ್ಜಲ ಪ್ರದೇಶಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮಾಲಿನ್ಯದಿಂದಾಗಿ ನೀರಿನ ಗುಣಮಟ್ಟವೂ ನಿರಂತರವಾಗಿ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ 169 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (SDGs) 53 ಗುರಿಗಳು ನೇರವಾಗಿ ಅಂತರ್ಜಲಕ್ಕೆ ಸಂಬಂಧಿಸಿದ್ದು, ವಿಶೇಷವಾಗಿ ಗುರಿ 6 ಮತ್ತು 13 ಇದಕ್ಕೆ ಪೂರಕವಾಗಿವೆ. ಅಮೆರಿಕದ ಶಾಲಾ ಪಠ್ಯದಲ್ಲಿಯೇ ಅಂತರ್ಜಲ, ಅದರ ಇಂಗುವಿಕೆ (Porosity), ಪೆರ್ಮಿಯಬಲಿಟಿ (Permeability), ಅಂತರ್ಜಲ ಹರಿವು ಹಾಗೂ ಕಲುಷಿತಗೊಳ್ಳುವಿಕೆ ಕುರಿತು ವಿವರಿಸುವ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ನಮ್ಮ ದೇಶದಲ್ಲೂ ಭವಿಷ್ಯದ ಪೀಳಿಗೆಗೆ ಜಲಸಂಪನ್ಮೂಲದ ಲಭ್ಯತೆ ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲಾ ಹಂತದಲ್ಲಿಯೇ ಈ ವಿಷಯಗಳ ಸೇರ್ಪಡೆ ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ಮನವರಿಕೆ ಮಾಡಿಕೊಡಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCFSE 2023) ಅಡಿಯಲ್ಲಿ ಎನ್‌ಸಿಇಆರ್‌ಟಿ 2027-28ನೇ ಸಾಲಿಗೆ 10ನೇ ತರಗತಿಯ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ. ಈ ಹೊಸ ಪಠ್ಯದಲ್ಲಿ ಮಳೆನೀರು ಕೊಯ್ಲು (Rainwater Harvesting), ಕೃತಕ ಅಂತರ್ಜಲ ಮರುಪೂರಣ (Managed Aquifer Recharge) ತಂತ್ರಜ್ಞಾನಗಳು, ಪ್ರಕೃತಿ ಆಧಾರಿತ ಪರಿಹಾರಗಳಾದ ನಿರ್ಮಿತ ಜೌಗು ಪ್ರದೇಶಗಳು ಮತ್ತು ಹಸಿರು ಮೇಲ್ಛಾವಣಿಗಳನ್ನು ಸೇರಿಸಲು ಕೋರಲಾಗಿದೆ. ಇದರೊಂದಿಗೆ ಅಂತರ್ಜಲ ನಕ್ಷೆ (Aquifer Mapping) ಮತ್ತು ಮಾಡೆಲಿಂಗ್, ಅತ್ಯಾಧುನಿಕ ನಿಗಾ ತಂತ್ರಜ್ಞಾನಗಳಾದ ಐಒಟಿ (IoT) ಹಾಗೂ ರಿಮೋಟ್ ಸೆನ್ಸಿಂಗ್ ಬಳಕೆ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯ, ಕೇಂದ್ರ ಅಂತರ್ಜಲ ಮಂಡಳಿ ಹಾಗೂ ನೀತಿ ಆಯೋಗದ ವಿವಿಧ ಜಲ ಸಂರಕ್ಷಣಾ ಯೋಜನೆಗಳ ಪ್ರಮುಖ ವಿಷಯಗಳನ್ನು ಒಳಗೊಂಡ ವಿಸ್ತೃತ ಅಧ್ಯಾಯವನ್ನು ಸೇರಿಸಲು ಎನ್‌ಸಿಇಆರ್‌ಟಿ ಜೊತೆ ವ್ಯವಹರಿಸುವಂತೆ ಕೇಂದ್ರ ಸರ್ಕಾರಕ್ಕೆ ವಿನಂತಿಸಲಾಗಿದೆ.

ಭವಿಷ್ಯದ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇವಲ ಯೋಜನೆಗಳನ್ನು ರೂಪಿಸಿದರೆ ಸಾಲದು, ನಮ್ಮ ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆಯ ನೈಜ ಮಹತ್ವವನ್ನು ಶಾಲಾ ಹಂತದಲ್ಲಿಯೇ ತಿಳಿಸಿಕೊಡಬೇಕಿದೆ. ಹವಾಮಾನ ಬದಲಾವಣೆಯಿಂದಾಗಿ ಮೇಲ್ಮೈ ಜಲಮೂಲಗಳು ಬತ್ತಿಹೋಗುತ್ತಿದ್ದು, ನಾವಿಂದು ಬಹುತೇಕ ಅಂತರ್ಜಲವನ್ನೇ ಅವಲಂಬಿಸುವಂತಾಗಿದೆ. ಈ ನಿಟ್ಟಿನಲ್ಲಿ, ಜಾಗತಿಕ ಮಾದರಿಯಲ್ಲಿ ನಮ್ಮ ದೇಶದ ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ 'ಅಂತರ್ಜಲ' ಕುರಿತ ಪ್ರತ್ಯೇಕ ಹಾಗೂ ವಿಸ್ತೃತ ಅಧ್ಯಾಯವನ್ನು ಅಳವಡಿಸುವುದು ಇಂದಿನ ತುರ್ತು ಅಗತ್ಯವಾಗಿದ್ದು, ರಾಜ್ಯ ಸರ್ಕಾರದ ಈ ಮಹತ್ವದ ಹಾಗೂ ದೂರದೃಷ್ಟಿಯ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ