ಹುಬ್ಬಳಿ : ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿ-ಆರ್‌ಐ) ರಾಜ್ಯದ ಮೊದಲ ಸರ್ಕಾರಿ ಮಾದರಿಯ ಕೃತಕ ಗರ್ಭಧಾರಣೆ (ಐವಿಎಫ್) ಕೇಂದ್ರ ಆರಂಭಗೊಳ್ಳಲು ಸಿದ್ಧತೆ ನಡೆಸಿದ್ದು, ಉದ್ಘಾಟನೆಯ ಹಂತ ತಲುಪಿದೆ. ಈ ಮೂಲಕ ಸರ್ಕಾರಿ ಹಂತದಲ್ಲಿ ಇಂತಹ ಸುಧಾರಿತ ಸೌಲಭ್ಯ ಹೊಂದಲಿರುವ ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕೆಎಂಸಿ-ಆರ್‌ಐ ಪಾತ್ರವಾಗಲಿದೆ. ಮೊದಲು ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಈ ಕೇಂದ್ರವನ್ನು ನಡೆಸಲು ಯೋಜಿಸಲಾಗಿತ್ತಾದರೂ, ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ಹಾಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರ ಸಲಹೆಯಂತೆ ರಾಜ್ಯ ಸರ್ಕಾರವೇ ಸಂಪೂರ್ಣ ಅನುದಾನ ನೀಡಿ ಇದರ ಜವಾಬ್ದಾರಿ ವಹಿಸಿಕೊಂಡಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್ಕೆ) ಯೋಜನೆಯ ಅಡಿಯಲ್ಲೇ ಈ ಚಿಕಿತ್ಸೆಯನ್ನು ಒದಗಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿರುವುದರಿಂದ ಇದ್ದ ಎಲ್ಲ ಗೊಂದಲಗಳು ಹಾಗೂ ಅಡೆತಡೆಗಳು ನಿವಾರಣೆಯಾಗಿವೆ.
ಐವಿಎಫ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದ್ದು, ಬಡ ಕುಟುಂಬಗಳಿಗೆ ಇದು ಭರಿಸಲಾಗದ ಹೊರೆಯಾಗಿತ್ತು. ಇದನ್ನು ಮನಗಂಡಿರುವ ಸರ್ಕಾರ, ಫಲಾನುಭವಿಗಳಿಗೆ ಕೇವಲ 1,34,000 ರೂಪಾಯಿ ದರ ನಿಗದಿಪಡಿಸಿದೆ. ಒಂದು ವೇಳೆ ಮೊದಲ ಬಾರಿ ಚಿಕಿತ್ಸೆ ಯಶಸ್ವಿಯಾಗದಿದ್ದರೆ, ಇದೇ ದರದಲ್ಲಿ ಮೂರು ಬಾರಿ ಚಿಕಿತ್ಸೆ ಪಡೆಯುವ ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ. ಈ ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಸುಮಾರು 50,000 ರೂಪಾಯಿ ಮೌಲ್ಯದ ಔಷಧೋಪಚಾರಗಳನ್ನು ಟೆಂಡರ್ ಮೂಲಕ ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಸದ್ಯ ಕೇಂದ್ರದ ಶೇಕಡಾ 90 ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಸಿಎಸ್ಆರ್ ಅನುದಾನದಡಿ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಕೇಂದ್ರದ ನಿರ್ವಹಣೆಗೆ ಅತ್ಯಗತ್ಯವಾಗಿರುವ ಆರ್ಟಿಫಿಸಿಯಲ್ ರಿಪ್ರೋಡೆಕ್ಟ್ ಟೆಕ್ನಾಲಜಿಸ್ಟ್ ಹಾಗೂ ಎಂಬ್ರೋಲಾಜಿಸ್ಟ್ ಹುದ್ದೆಗಳನ್ನು ಸರ್ವಿಸ್ ಕಾಂಟ್ರೆಕ್ಟ್ (ಸೇವಾ ಒಪ್ಪಂದ) ಮಾದರಿಯಲ್ಲಿ ಟೆಂಡರ್ ಮೂಲಕ ಭರ್ತಿ ಮಾಡಿಕೊಳ್ಳಲು ಆದೇಶ ಬಂದಿದೆ. ಲೈಸನ್ಸ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅನುಮತಿ ಸಿಗುತ್ತಿದ್ದಂತೆ ಚಿಕಿತ್ಸೆ ಅಧಿಕೃತವಾಗಿ ಆರಂಭವಾಗಲಿದೆ ಎಂದು ಕೆಎಂಸಿಆರ್ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ತಿಳಿಸಿದ್ದಾರೆ. ಹುಬ್ಬಳ್ಳಿಯ ಈ ಕೇಂದ್ರದ ಪ್ರಗತಿಯನ್ನು ಆಧರಿಸಿ, ಮುಂಬರುವ ದಿನಗಳಲ್ಲಿ ಬೆಂಗಳೂರು, ಮೈಸೂರು ಹಾಗೂ ಕಲಬುರ್ಗಿಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಐವಿಎಫ್ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.