image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾಂಗ್ರೆಸ್ ಸರ್ಕಾರದಿಂದ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತ: ಡಾ. ಸಿ.ಟಿ. ರವಿ ಆರೋಪ

ಕಾಂಗ್ರೆಸ್ ಸರ್ಕಾರದಿಂದ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತ: ಡಾ. ಸಿ.ಟಿ. ರವಿ ಆರೋಪ

ಚಿಕ್ಕಮಗಳೂರು : ​ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಮೀಸಲಾತಿಯನ್ನು ಕಡಿತಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಅನ್ಯಾಯ ಎಸಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರು ನಗರದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರೊಂದಿಗೆ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಆದರೂ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಹೊರಟಿರುವುದು ಸಂವಿಧಾನ ಬಾಹಿರ ನಡೆಯಾಗಿದೆ ಎಂದು ಟೀಕಿಸಿದರು. ಜನಸಂಖ್ಯೆಯ ಆಧಾರದ ಮೇಲೆ ಈ ಹಿಂದೆ ಇದ್ದ ಎಸ್‌ಸಿ ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಶೇ. 50 ರಷ್ಟು ಮೀಸಲಾತಿ ಮಿತಿಯನ್ನು ಕಾಯ್ದುಕೊಳ್ಳುವ ನೆಪದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳ ಹಕ್ಕನ್ನು ಕಡಿತಗೊಳಿಸುತ್ತಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಅನ್ಯಾಯಕ್ಕೆ ಕಾರಣರಾಗಿದ್ದಾರೆ ಎಂದು ಅವರು ಆರೋಪಿಸಿದರು.

​ರಾಜ್ಯದ ಪ್ರಸ್ತುತ ಸಮಸ್ಯೆಗಳ ಕುರಿತು ಮಾತನಾಡಿದ ರವಿ ಅವರು, ರೈತರಿಗೆ ದಿನಕ್ಕೆ 7 ಗಂಟೆ ತ್ರೀ-ಫೇಸ್ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಈಗ 3-4 ಗಂಟೆಯೂ ವಿದ್ಯುತ್ ನೀಡುತ್ತಿಲ್ಲ. ಐಡಿಪಿಆರ್ ಇಲಾಖೆಯ ವರದಿಯ ಪ್ರಕಾರ ರಾಜ್ಯದ 14,000 ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಕೊರತೆಯಿದೆ. ಆದರೆ ಆಳುವ ಸರ್ಕಾರಕ್ಕೆ ಕುಡಿಯುವ ನೀರು, ರೈತರ ಆತ್ಮಹತ್ಯೆ ಮತ್ತು ಎಸ್‌ಸಿಪಿ-ಟಿಎಸ್‌ಪಿ ಅನುದಾನದ ದುರುಪಯೋಗ ತಡೆಯುವುದಕ್ಕಿಂತ ಹಿಜಾಬ್ ವಿಷಯವೇ ಪ್ರಮುಖ ಆದ್ಯತೆಯಾಗಿ ಮಾರ್ಪಟ್ಟಿದೆ. ಶಾಲೆಗಳಲ್ಲಿ ಸಮವಸ್ತ್ರ ಇರಬೇಕೆಂದು ನಾವು ಹೇಳಿದರೆ, ಸಮವಸ್ತ್ರದ ಭಾಗವಲ್ಲದ ಹಿಜಾಬ್ ಇರಬೇಕೆಂದು ಕಾಂಗ್ರೆಸ್ ಹಠ ಹಿಡಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಇದೇ ವೇಳೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಕೆಪಿಎಸ್‌ಸಿ ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ ಅವರು, ನೀಟ್ ಪತ್ರಿಕೆ ಸೋರಿಕೆಯ ತನಿಖೆಯನ್ನು ಈಗಾಗಲೇ ಸಿಬಿಐ ನಡೆಸುತ್ತಿದ್ದು, ತಪ್ಪು ಮಾಡಿದವರನ್ನು ಬಂಧಿಸಲಾಗಿದೆ. ಇದಕ್ಕಾಗಿ ಇಡೀ ಪರೀಕ್ಷೆಯನ್ನೇ ರದ್ದುಪಡಿಸಬೇಕು ಎನ್ನುವುದು ನೆಗಡಿಯಾದರೆ ಮೂಗು ಕತ್ತರಿಸಿಕೊಂಡಂತೆ. ಇದರ ಬದಲು ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಹೆಸರಾಗಿರುವ ಕೆಪಿಎಸ್‌ಸಿ ವ್ಯವಸ್ಥೆಯನ್ನು ಮೊದಲು ಸರಿಪಡಿಸಲಿ. ಒಂದೇ ಕೊಠಡಿಯಲ್ಲಿ ಕುಳಿತಿದ್ದ 17 ಅಭ್ಯರ್ಥಿಗಳು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.

​ಅಂತರರಾಷ್ಟ್ರೀಯ ವಿದ್ಯಮಾನಗಳ ಕುರಿತು ಮಾತನಾಡಿದ ರವಿ ಅವರು, ಇರಾನ್ ಯುದ್ಧದ ಪರಿಣಾಮ ಭಾರತದ ಮೇಲೂ ಉಂಟಾಗುತ್ತಿದ್ದು, ದೇಶದ ವಿದೇಶಿ ವಿನಿಮಯವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಚಿನ್ನದ ಖರೀದಿ ಕಡಿಮೆ ಮಾಡಲು ಮತ್ತು ಇಂಧನ ಉಳಿತಾಯ ಮಾಡಲು ದೇಶದ ಜನತೆಗೆ ಕರೆ ನೀಡಿದ್ದಾರೆ. ಹಿಂದೆ ವಿದೇಶಿ ವಿನಿಮಯ ಬರಿದಾಗಿ ಭಾರತದ ಚಿನ್ನವನ್ನು ಅಡವಿಟ್ಟ ಇತಿಹಾಸವನ್ನು ನೆನಪಿಸಿದ ಅವರು, ಪ್ರಧಾನಿ ಮೋದಿಯವರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದು ದೇಶದ ಅಭಿವೃದ್ಧಿಯ ಒಪ್ಪಂದಗಳಿಗಾಗಿಯೇ ಹೊರತು ಮೋಜು ಮಸ್ತಿಗಲ್ಲ. ಮೂರು ದಿನ ಪ್ರಚಾರ ಮಾಡಿ 30 ದಿನ ವಿದೇಶದಲ್ಲಿ ಕಳೆಯುವ ಕಾಂಗ್ರೆಸ್ ನಾಯಕರು ಈ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದರು. ಅಲ್ಲದೆ, ಮನ್ ಕಿ ಬಾತ್, ನಮೋ ಆ್ಯಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ದೇಶದ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದು, ಇದೇ ಕಾರಣಕ್ಕೆ ದೇಶದ ಜನರು ಅವರನ್ನು ಸತತ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಡಾ. ಸಿ.ಟಿ. ರವಿ ಶ್ಲಾಘಿಸಿದರು.

Category
ಕರಾವಳಿ ತರಂಗಿಣಿ