image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಸೌಹಾರ್ದತೆ’ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ!

ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಸೌಹಾರ್ದತೆ’ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ!

ಉಡುಪಿ: ಮನೆ ನಿವೇಶನದ ಸಮಸ್ಯೆಗೆ ಸಂಬಂಧಿಸಿದಂತೆ ವೃದ್ಧೆಯೊಬ್ಬರ ಪರವಾಗಿ ಬಂದಿದ್ದ ಬುರ್ಖಾಧಾರಿ ಮಹಿಳೆಯರನ್ನು ನೋಡಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿದ ಹೇಳಿಕೆಯೊಂದು ಈಗ ಜಿಲ್ಲೆಯಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಗಿರಿಜಾ ಶೆಟ್ಟಿಗಾರ್ ಎಂಬ ವೃದ್ಧ ವಿಧವೆಯನ್ನು ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಸಚಿವರ ಗೆಸ್ಟ್‌ಹೌಸ್‌ಗೆ ಕರೆತಂದು, ಈಕೆ ನಮ್ಮ ನೆರೆಮನೆಯ ಹಿಂದೂ ಮಹಿಳೆ, ಇವರಿಗೆ ನಿವೇಶನ ಕೊಡಿಸಿ ಎಂದು ಮನವಿ ಮಾಡಿದ್ದರು. ಈ ವೇಳೆ ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, "ಇದು ನಮ್ಮ ಭಾರತದ ನೈಜ ಸೌಹಾರ್ದತೆ, ಹಿಂದೂ ಮಹಿಳೆಯ ಪರವಾಗಿ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ, ಉಡುಪಿಯ ಬಿಜೆಪಿಗರು ಇವರನ್ನು ನೋಡಿ ಕಲಿಯಬೇಕು" ಎಂದು ಹೇಳಿಕೆ ನೀಡಿದ್ದರು. ಆದರೆ, ಸಚಿವರನ್ನು ಭೇಟಿಯಾಗಲು ಬಂದಿದ್ದ ಬುರ್ಖಾಧಾರಿ ಮಹಿಳೆಯರು ನೆರೆಮನೆಯವರಲ್ಲ, ಬದಲಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಅದೇ ವೃದ್ಧೆಯ ಸ್ವಂತ ಪುತ್ರಿ ಎಂಬ ವಿಚಾರ ಈಗ ಬಹಿರಂಗವಾಗಿದ್ದು, ಸಚಿವರ ನಡೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಘಟನೆಯ ಸತ್ಯಾಸತ್ಯತೆ ತಿಳಿಯದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯ ಬಿಜೆಪಿಗರಿಗೆ ಸೌಹಾರ್ದತೆಯ ಬಿಟ್ಟಿ ಉಪದೇಶ ನೀಡಿದ್ದಾರೆ ಎಂದು ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಂತ ತಾಯಿಯನ್ನೇ ನೆರೆಮನೆಯ ಮಹಿಳೆ ಎಂದು ಸುಳ್ಳು ಹೇಳಿ ಸಚಿವೆಯನ್ನೇ ಯಾಮಾರಿಸಿರುವ ಬುರ್ಖಾಧಾರಿಗಳ ಮನಸ್ಥಿತಿಯನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಎಂದಿಗೂ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವಾಗ ಜಾತಿ, ಧರ್ಮದ ಭೇದಭಾವ ಮಾಡಿಲ್ಲ. ಜಿಲ್ಲೆಗೆ ಅತಿಥಿಯಂತೆ ಬರುವ ಉಸ್ತುವಾರಿ ಸಚಿವರು ಕೇವಲ ಪ್ರಚಾರದ ಹಪಾಹಪಿಗೆ ಬಿದ್ದು ಬಿಜೆಪಿಯನ್ನು ಟೀಕಿಸುವುದನ್ನು ನಿಲ್ಲಿಸಬೇಕು ಹಾಗೂ ರಾಷ್ಟ್ರವಿರೋಧಿ ಮತ್ತು ಮತೀಯ ಶಕ್ತಿಗಳೊಂದಿಗೆ ಬಿಜೆಪಿ ಎಂದಿಗೂ ರಾಜಿಯಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಜಿಲ್ಲೆಯ ಅಭಿವೃದ್ಧಿಗೆ ಎಳ್ಳು-ನೀರು ಬಿಟ್ಟಿರುವ ಸಚಿವರ ಅವಿವೇಕದ ಮಾತು ಅಕ್ಷಮ್ಯವಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಮುಂದುವರಿದರೆ ಜಿಲ್ಲಾ ಮಹಿಳಾ ಮೋರ್ಚಾದಿಂದ ಸಚಿವರ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಎಚ್ಚರಿಸಿದ್ದಾರೆ.

​ಈ ಎಲ್ಲ ರಾಜಕೀಯ ವಿವಾದಗಳ ನಡುವೆಯೂ, ವೃದ್ಧೆ ಗಿರಿಜಾ ಶೆಟ್ಟಿಗಾರ್ ಅವರ ಅಹವಾಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾನವೀಯ ಆಧಾರದ ಮೇಲೆ ಸ್ಪಂದಿಸಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ವೃದ್ಧೆಗೆ 1990ರಲ್ಲಿ ವಸತಿ ಯೋಜನೆಯಡಿ 5 ಸೆಂಟ್ಸ್ ಜಾಗ ಮಂಜೂರಾಗಿ ಹಕ್ಕುಪತ್ರ ಸಿಕ್ಕಿದ್ದರೂ, ಅರಣ್ಯ ಇಲಾಖೆಯು ಅದನ್ನು 'ಡೀಮ್ಡ್ ಫಾರೆಸ್ಟ್' ಎಂದು ಆಕ್ಷೇಪ ಎತ್ತಿರುವುದು ಮತ್ತು ಗ್ರಾಪಂ ಮನೆ ಕಟ್ಟಲು ಪರವಾನಗಿ ನೀಡದಿರುವ ತಾಂತ್ರಿಕ ಸಮಸ್ಯೆಗಳನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ತಾಂತ್ರಿಕ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಿ, ಕೈಗೊಂಡ ಕ್ರಮದ ಬಗ್ಗೆ ತಮಗೆ ವರದಿ ಸಲ್ಲಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ