image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯ ಶಿಕ್ಷಣ ನೀತಿ (SEP) ಅನುಷ್ಠಾನಕ್ಕೆ ಸಚಿವರ ಉಪಸಮಿತಿ ರಚನೆ: ವರದಿ ಪರಾಮರ್ಶೆಗೆ ಸಿಎಂ ಸಿದ್ದರಾಮಯ್ಯ ಆದೇಶ

ರಾಜ್ಯ ಶಿಕ್ಷಣ ನೀತಿ (SEP) ಅನುಷ್ಠಾನಕ್ಕೆ ಸಚಿವರ ಉಪಸಮಿತಿ ರಚನೆ: ವರದಿ ಪರಾಮರ್ಶೆಗೆ ಸಿಎಂ ಸಿದ್ದರಾಮಯ್ಯ ಆದೇಶ

ಬೆಂಗಳೂರು : ರಾಜ್ಯದಲ್ಲಿ ಬಹುಚರ್ಚಿತ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ, ಅದನ್ನು ಜಾರಿಗೊಳಿಸಲು ಸೂಕ್ತ ಶಿಫಾರಸುಗಳನ್ನು ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಂಪುಟ ಉಪಸಮಿತಿಯನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಮೇ 7 ರಂದು ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಸಮಿತಿಯ ಆಯ್ಕೆಯ ಜವಾಬ್ದಾರಿಯನ್ನು ನೀಡಲಾಗಿದ್ದು, ಅದರಂತೆ ಈ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಗೃಹ ಸಚಿವರ ನೇತೃತ್ವದ ಈ ಸಮಿತಿಯಲ್ಲಿ ಕಾನೂನು ಸಚಿವ ಎಚ್. ಕೆ. ಪಾಟೀಲ್, ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

​ಈ ನೂತನ ಸಂಪುಟ ಉಪಸಮಿತಿಯು ಪ್ರೊ. ಸುಖದೇವ್ ಥೋರಟ್ ಆಯೋಗ ಸಿದ್ಧಪಡಿಸಿರುವ ಸುಮಾರು 8 ಸಂಪುಟಗಳ ಒಳಗೊಂಡ 2,197 ಪುಟಗಳ ಬೃಹತ್ ಅಂತಿಮ ವರದಿಯನ್ನು ಸಂಪೂರ್ಣವಾಗಿ ಪರಾಮರ್ಶಿಸುವ ಪ್ರಮುಖ ಜವಾಬ್ದಾರಿಯನ್ನು ಹೊತ್ತಿದೆ. ಹೊಸ ಶಿಕ್ಷಣ ನೀತಿಯನ್ನು ಪ್ರಾಯೋಗಿಕವಾಗಿ ತರಲು ತಗಲುವ ಒಟ್ಟು ಆರ್ಥಿಕ ವೆಚ್ಚ ಮತ್ತು ಇದಕ್ಕೆ ಅಗತ್ಯವಿರುವ ಹೆಚ್ಚುವರಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಲಭ್ಯತೆಯ ಬಗ್ಗೆ ಸಮಿತಿ ಪರಿಶೀಲಿಸಲಿದೆ. ಇದರೊಂದಿಗೆ ಪಠ್ಯಕ್ರಮದ ಸುಧಾರಣೆಗಳು, ಡೀಮ್ಡ್ ಮತ್ತು ಏಕೀಕೃತ ವಿಶ್ವವಿದ್ಯಾಲಯಗಳು ಸೇರಿದಂತೆ ಹೊಸದಾಗಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳ ರಚನೆ ಮತ್ತು ನಿಯಮಾವಳಿಗಳ ಕುರಿತಾದ ಪ್ರಮುಖ ಅಂಶಗಳನ್ನು ವಿಶ್ಲೇಷಿಸಲಿದೆ. ಎಲ್ಲಾ ಕಾನೂನು ಮತ್ತು ಆಡಳಿತಾತ್ಮಕ ಚೌಕಟ್ಟುಗಳನ್ನು ಪರಿಶೀಲಿಸಿದ ನಂತರ ರಾಜ್ಯದಲ್ಲಿ ಎಸ್‌ಇಪಿಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ತೆಗೆದುಕೊಳ್ಳಬೇಕಾದ ಹಂತ-ಹಂತದ ಕ್ರಮಗಳ ಕುರಿತು ಸಮಿತಿಯು ಸರ್ಕಾರಕ್ಕೆ ಅಂತಿಮ ಶಿಫಾರಸುಗಳನ್ನು ಸಲ್ಲಿಸಲಿದ್ದು, ಈ ಪ್ರಕ್ರಿಯೆಗೆ ಉನ್ನತ ಶಿಕ್ಷಣ ಇಲಾಖೆಯು ಸಂಪೂರ್ಣ ಸಚಿವಾಲಯದ ಬೆಂಬಲವನ್ನು ನೀಡಲಿದೆ.

​ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಪರ್ಯಾಯವಾಗಿ ರಾಜ್ಯದ ಸ್ಥಳೀಯ ಅಗತ್ಯಗಳು, ಸಂಸ್ಕೃತಿ ಮತ್ತು ಭಾಷೆಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದಿಂದ ಈ ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ರೂಪಿಸಲಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ತಂದಿದ್ದ ಎನ್‌ಇಪಿ ಅಡಿಯಲ್ಲಿನ 4 ವರ್ಷಗಳ ಪದವಿ ಶಿಕ್ಷಣ ಸೇರಿದಂತೆ ಕೆಲವು ನಿಯಮಗಳು ವಿದ್ಯಾರ್ಥಿಗಳಿಗೆ ಹೊರೆಯಾಗುತ್ತವೆ ಎಂದು ರಾಜ್ಯ ಸರ್ಕಾರ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ 2024ರಲ್ಲಿ ರಚನೆಯಾಗಿದ್ದ ಥೋರಟ್ ಸಮಿತಿಯು 2+8+4 ಶೈಕ್ಷಣಿಕ ಸೂತ್ರವನ್ನು ಪ್ರಸ್ತಾಪಿಸಿದ್ದು, ಪದವಿ ವ್ಯಾಸಂಗವನ್ನು ಮರಳಿ 3 ವರ್ಷಗಳ ಅವಧಿಗೆ ನಿಗದಿಪಡಿಸಲು ಹಾಗೂ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಮತ್ತು ಮೀಸಲಾತಿಗೆ ಆದ್ಯತೆ ನೀಡಲು ಶಿಫಾರಸು ಮಾಡಿದೆ. ಈ ಎಲ್ಲಾ ಅಂಶಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ದಾರಿ ದೀಪವಾಗುವುದು ಪ್ರಸ್ತುತ ರಚನೆಯಾಗಿರುವ ಸಂಪುಟ ಉಪಸಮಿತಿಯ ಮುಖ್ಯ ಕಾರ್ಯಸೂಚಿಯಾಗಿದೆ.

Category
ಕರಾವಳಿ ತರಂಗಿಣಿ