image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವೈದ್ಯಕೀಯ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ರಾಜ್ಯಕ್ಕೆ ಹೆಚ್ಚುವರಿ 1,122 ವೈದ್ಯಕೀಯ ಸೀಟುಗಳ ಮಂಜೂರಾತಿ!

ವೈದ್ಯಕೀಯ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ರಾಜ್ಯಕ್ಕೆ ಹೆಚ್ಚುವರಿ 1,122 ವೈದ್ಯಕೀಯ ಸೀಟುಗಳ ಮಂಜೂರಾತಿ!

ಬೆಂಗಳೂರು: ಕರ್ನಾಟಕದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ದೊಡ್ಡ ಮೈಲಿಗಲ್ಲು ಸ್ಥಾಪನೆಯಾಗಿದ್ದು, ರಾಜ್ಯಕ್ಕೆ ಹೆಚ್ಚುವರಿಯಾಗಿ ಒಟ್ಟು 1,122 ಯುಜಿ (UG) ಮತ್ತು ಪಿಜಿ (PG) ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಪ್ರಕಟಿಸಿದ್ದಾರೆ. ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸೀಟುಗಳ ಹೆಚ್ಚಳದಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

​ರಾಜ್ಯದಲ್ಲಿ ಪ್ರಸ್ತುತ ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ಒಟ್ಟು 72 ವೈದ್ಯಕೀಯ ಕಾಲೇಜುಗಳಿದ್ದು, ಇವುಗಳಲ್ಲಿ 13,945 ಯುಜಿ ಹಾಗೂ 7,727 ಪಿಜಿ ಸೀಟುಗಳು ಲಭ್ಯವಿವೆ. ಕೇಂದ್ರ ಸರ್ಕಾರದ 'ಭಾರತದಲ್ಲಿನ ಅಸ್ತಿತ್ವದಲ್ಲಿರುವ ವೈದ್ಯಕೀಯ ಕಾಲೇಜುಗಳ ಬಲವರ್ಧನೆ ಮತ್ತು ಮೇಲ್ದರ್ಜೆಗೇರಿಸುವಿಕೆ' ಯೋಜನೆಯಡಿ ಸೀಟು ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಈಗ ಅನುಮೋದನೆ ದೊರೆತಿದೆ. ಇದರ ಅನ್ವಯ 11 ವೈದ್ಯಕೀಯ ಸಂಸ್ಥೆಗಳಲ್ಲಿ ತಲಾ 50 ರಂತೆ ಒಟ್ಟು 550 ಯುಜಿ ಸೀಟುಗಳು ಹಾಗೂ 23 ಸಂಸ್ಥೆಗಳಲ್ಲಿ ಒಟ್ಟು 572 ಹೊಸ ಪಿಜಿ ಸೀಟುಗಳ ಮಂಜೂರಾತಿ ಸಿಕ್ಕಿದೆ. ಹೊಸದಾಗಿ 10 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿ ಹಂಚಬೇಕಾಗಿದ್ದಷ್ಟು ಸೀಟುಗಳು, ಈಗ ರಾಜ್ಯ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಿಲ್ಲದೆ ಲಭ್ಯವಾಗಿರುವುದು ನಮ್ಮ ಸರ್ಕಾರದ ದೊಡ್ಡ ಸಾಧನೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

​ಪ್ರತಿ ಸೀಟು ಹೆಚ್ಚಳಕ್ಕೆ ತಗಲುವ 1.5 ಕೋಟಿ ರೂಪಾಯಿ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ಭರಿಸಲಿವೆ. ಯುಜಿ ಸೀಟುಗಳ ಹೆಚ್ಚಳಕ್ಕಾಗಿ ಒಟ್ಟು 825 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ ಕೇಂದ್ರದ ಪಾಲು 495 ಕೋಟಿ ರೂ. ಹಾಗೂ ರಾಜ್ಯದ ಪಾಲು 330 ಕೋಟಿ ರೂ. ಆಗಿದೆ. ಅದೇ ರೀತಿ ಪಿಜಿ ಸೀಟುಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ 20 ವೈದ್ಯಕೀಯ ಕಾಲೇಜುಗಳ 528 ಸೀಟುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಧನಸಹಾಯ ನೀಡಲಿವೆ. ಇನ್ನುಳಿದ 4 ಸ್ವತಂತ್ರ ಸ್ನಾತಕೋತ್ತರ ಸಂಸ್ಥೆಗಳ 44 ಪಿಜಿ ಸೀಟುಗಳಿಗೆ ಕೇಂದ್ರ ಸರ್ಕಾರವೇ ಶೇ. 100ರಷ್ಟು ಸಂಪೂರ್ಣ ಧನಸಹಾಯ ನೀಡಲಿದೆ. ಈ ಪ್ರಕ್ರಿಯೆಯನ್ನು ಮುಂದುವರೆಸಲು ಶೀಘ್ರದಲ್ಲೇ ಒಪ್ಪಂದಕ್ಕೆ (MOU) ಸಹಿ ಹಾಕಲಾಗುವುದು ಮತ್ತು ಎಸ್‌ಎನ್‌ಎ-ಸ್ಪರ್ಶ್ (SNA-Sparsh) ಖಾತೆಗಳನ್ನು ತೆರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.

​ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET-UG) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಶರಣಪ್ರಕಾಶ್ ಪಾಟೀಲ್, ಮುಂದಿನ ಸಾಲಿನಿಂದಲೇ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಗಳಿಗೆ ತಮ್ಮದೇ ಆದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CET) ನಡೆಸಲು ಮುಕ್ತ ಅವಕಾಶ ನೀಡಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಅತ್ಯಂತ ಪಾರದರ್ಶಕ, ನ್ಯಾಯಸಮ್ಮತ ಮತ್ತು ವಿದ್ಯಾರ್ಥಿ ಸ್ನೇಹಿ ರೀತಿಯಲ್ಲಿ ಹಳೆಯ ಸಿಇಟಿ ವ್ಯವಸ್ಥೆಯನ್ನು ಪುನಃ ಜಾರಿಗೆ ತರಲು ಕೇಂದ್ರ ಸರ್ಕಾರ ಕೂಡಲೇ ಕಾನೂನುಬದ್ಧ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

​ನೀಟ್ ಪರೀಕ್ಷೆಯು ಪ್ರತಿವರ್ಷ ಗೊಂದಲದ ಗೂಡಾಗುತ್ತಿದ್ದು, ಇತ್ತೀಚಿನ ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಎಂಬಿಬಿಎಸ್ ಸೀಟುಗಳನ್ನು ಮಾರಾಟ ಮಾಡುವ ಉದ್ದೇಶದಿಂದಲೇ ಇಂತಹ ಅಕ್ರಮಗಳು ನಡೆಯುತ್ತಿವೆ. ನಮಗೆ ಸಿಬಿಐ (CBI) ತನಿಖೆಯ ಮೇಲೆ ನಂಬಿಕೆಯಿಲ್ಲ, ಹೀಗಾಗಿ ನೀಟ್ ಅಕ್ರಮದ ಬಗ್ಗೆ ನ್ಯಾಯಾಂಗದ ಮೂಲಕ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

​ಕರ್ನಾಟಕದ ಸಿಇಟಿ ವ್ಯವಸ್ಥೆಯು ಗ್ರಾಮೀಣ, ಮಧ್ಯಮ ವರ್ಗದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ಯಶಸ್ವಿಯಾದ ಇತಿಹಾಸ ಹೊಂದಿದೆ. ರಾಜ್ಯಗಳ ಭಾಷಾ ವೈವಿಧ್ಯತೆ, ಪಠ್ಯಕ್ರಮ ಮತ್ತು ವಿದ್ಯಾರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಆಯಾ ರಾಜ್ಯಗಳೇ ಉತ್ತಮವಾಗಿ ಅರ್ಥಮಾಡಿಕೊಳ್ಳಬಲ್ಲವು. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಹಕ್ಕನ್ನು ಗೌರವಿಸುವುದು ಭಾರತದ ಸಂವಿಧಾನದ ಫೆಡರಲ್ ವ್ಯವಸ್ಥೆಯ ಆತ್ಮವಾಗಿದೆ. ಹೀಗಾಗಿ ನೀಟ್ ರದ್ದುಪಡಿಸಿ ಸಿಇಟಿ ಮರು ಜಾರಿಗೆ ತರಲು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಅಧಿಕೃತ ಪತ್ರ ಬರೆದಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ