ಬೆಂಗಳೂರು : ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಬೃಹತ್ ನಕಲಿ ಐಟಿಸಿ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಈ ಹಗರಣದ ತನಿಖೆಯ ಭಾಗವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ್ದೆನ್ನಲಾದ ಪ್ರಸಿದ್ಧ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಗೆ ಇಲಾಖೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ನಕಲಿ ಬಿಲ್‌ಗಳ ಸಾಗಾಟಕ್ಕಾಗಿ ನ್ಯಾಷನಲ್ ಟ್ರಾವೆಲ್ಸ್‌ಗೆ ಸೇರಿದ ಹಾಗೂ ಅದು ಗುತ್ತಿಗೆ ಪಡೆದಿದ್ದ ಲಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಬೇಡಿಕೆಯಿರುವ ‘ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್’ (ಗುಜರಿ ವಸ್ತುಗಳು) ಹೆಸರಿನಲ್ಲಿ ಈ ದಂಧೆ ನಡೆಯುತ್ತಿದ್ದು, ತೆರಿಗೆ ವಂಚಿಸುವ ಸಲುವಾಗಿ ಕರ್ನಾಟಕದಿಂದ ಸ್ಕ್ರ್ಯಾಪ್ ಆಮದು ಮಾಡಿಕೊಳ್ಳುತ್ತಿರುವಂತೆ ನಕಲಿ ಕಂಪನಿಗಳ ಹೆಸರಿನಲ್ಲಿ ಖೊಟ್ಟಿ ಬಿಲ್‌ಗಳನ್ನು ಸೃಷ್ಟಿಸಲಾಗುತ್ತಿತ್ತು. ತಿಂಗಳಿಗೆ ಸುಮಾರು 20 ರಿಂದ 25 ಭಾರಿ ಸರಕು ಸಾಗಣೆ (HGV) ವಾಹನಗಳಲ್ಲಿ ಸ್ಕ್ರ್ಯಾಪ್ ರವಾನೆಯಾಗುತ್ತಿದೆ ಎಂದು ಸುಳ್ಳು ‘ಇ-ವೇ ಬಿಲ್’ ಸೃಷ್ಟಿಸಲಾಗುತ್ತಿತ್ತಾದರೂ, ಭೌತಿಕವಾಗಿ ಈ ವಾಹನಗಳಲ್ಲಿ ಯಾವುದೇ ಸರಕು ಇರುತ್ತಿರಲಿಲ್ಲ. ಕೇವಲ ನಕಲಿ ಬಿಲ್‌ಗಳು ಮಾತ್ರ ಹಂತ ಹಂತವಾಗಿ ಹಸ್ತಾಂತರಗೊಂಡು ಮಹಾರಾಷ್ಟ್ರ ತಲುಪುತ್ತಿದ್ದವು.
ಬೆಂಗಳೂರಿನಲ್ಲಿ ಟಂಗ್‌ಸ್ಟನ್ ಸ್ಕ್ರ್ಯಾಪ್ ಅಷ್ಟಾಗಿ ಸಿಗದೇ ಇದ್ದರೂ, ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ರಫ್ತಾಗಿರುವ ದಾಖಲೆಗಳು ಸೃಷ್ಟಿಯಾಗಿದ್ದವು. ಸುಮಾರು 217 ಕೋಟಿ ರೂ. ವಹಿವಾಟು ನಡೆಸಿ, 39 ಕೋಟಿ ರೂ. ತೆರಿಗೆ ಬಿಲ್ ಸೃಷ್ಟಿಸಿದ್ದನ್ನು ಗಮನಿಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಇಡೀ ನೆಟ್‌ವರ್ಕ್ ಬಯಲಾಗಿದೆ. ಈ ಜಾಲಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ಐವರನ್ನು ಬಂಧಿಸಲಾಗಿತ್ತು, ಸದ್ಯ ತನಿಖೆ ಮುಂದುವರಿಸಿರುವ ಅಧಿಕಾರಿಗಳು ‘ಎಸ್‌ಕೆಎಸ್ ಟ್ರೇಡರ್ಸ್’ನ ಸಲೀಮುಲ್ಲಾ ಹಾಗೂ ‘ಕೆಎಚ್ ಇ-ವೇಸ್ಟ್ ಸೈಕ್ಲರ್’ನ ಹಸನ್ ಬೇಗ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಎರಡು ಸಂಸ್ಥೆಗಳು ಬರೋಬ್ಬರಿ 2,384 ಕೋಟಿ ರೂ. ವಹಿವಾಟು ನಡೆಸಿ, 594 ಕೋಟಿ ರೂ. ಐಟಿಸಿ ಬಿಲ್ ಪಡೆದಿರುವುದು ದೃಢಪಟ್ಟಿದೆ. ಅದರಲ್ಲಿಯೂ ಎಸ್‌ಕೆಎಸ್ ಟ್ರೇಡರ್ಸ್‌ನ ವಹಿವಾಟು ಕೇವಲ ಮೂರು ವರ್ಷಗಳಲ್ಲಿ 50 ಕೋಟಿಯಿಂದ 945 ಕೋಟಿ ರೂ.ಗೆ ಏರಿಕೆಯಾಗಿತ್ತು. ತನಿಖೆಯ ವೇಳೆ ಈ ಸಂಸ್ಥೆಗಳಲ್ಲಿ ಯಾವುದೇ ಸರಕು ಸಾಗಾಟವಾಗಲಿ ಅಥವಾ ವ್ಯಕ್ತಿಗಳಾಗಲಿ ಇರಲಿಲ್ಲ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಒಟ್ಟಾರೆ ತನಿಖೆಯಲ್ಲಿ ಇಂತಹ 127 ನಕಲಿ ಸಂಸ್ಥೆಗಳ ಬೃಹತ್ ಜಾಲ ಪತ್ತೆಯಾಗಿದ್ದು, ಸದ್ಯ ನ್ಯಾಯಾಲಯದ ಆದೇಶದ ಮೇರೆಗೆ ಒಟ್ಟು 7 ಜನರನ್ನು ಬಂಧಿಸಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.