ಬೆಳಗಾವಿ : ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಮತ್ತು ನಿವೃತ್ತ ಸೈನಿಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಕೋಟ್ಯಾಂತರ ರೂಪಾಯಿ ಹೂಡಿಕೆ ಪಡೆದು ವಂಚಿಸಿದ ಗಂಭೀರ ಆರೋಪದಡಿ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮುಖ್ಯಸ್ಥ ಶಿವಾನಂದ ನೀಲಣ್ಣವರ್ ಅವರನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ. ಇಡೀ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಕೋಲಾಹಲ ಹಾಗೂ ಸಂಚಲನ ಮೂಡಿಸಿರುವ ಈ ಬಹುಕೋಟಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಒಂದರ ಮೇಲೊಂದರಂತೆ ಸ್ಫೋಟಕ ಮಾಹಿತಿಗಳು ಬಯಲಿಗೆ ಬರುತ್ತಿವೆ. ಜಿಲ್ಲಾಧಿಕಾರಿಗಳು ಹಾಗೂ ಸಹಕಾರ ಇಲಾಖೆಯ ಉನ್ನತ ಅಧಿಕಾರಿಗಳ ನಿರ್ದೇಶನದ ಮೇರೆಗೆ ಶಿವಾನಂದ ನೀಲಣ್ಣವರ್ ಅವರ ಕಚೇರಿ, ನಿವಾಸ ಹಾಗೂ ಅಪಾರ್ಟ್‌ಮೆಂಟ್‌ಗಳ ಮೇಲೆ ಜಂಟಿ ದಾಳಿ ನಡೆಸಲಾಗಿತ್ತು. ಈ ಸುದೀರ್ಘ ಶೋಧ ಕಾರ್ಯದ ಬೆನ್ನಲ್ಲೇ ಇದೀಗ ಆರೋಪಿ ನೀಲಣ್ಣವರ್ ಬಿಡುಗಡೆ ಮಾಡಿದ್ದಾನೆ ಎನ್ನಲಾದ ಆಡಿಯೋ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಶಿವಾನಂದ ನೀಲಣ್ಣವರ್ ಬಂಧನದ ಸುದ್ದಿ ಹರಡುತ್ತಿದ್ದಂತೆ ಬೆಳಗಾವಿಯಲ್ಲಿ ಹೂಡಿಕೆದಾರರ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತಿ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಆಸೆಗೆ ಬಿದ್ದು ನೂರಾರು ಜನಸಾಮಾನ್ಯರು, ಮಧ್ಯಮ ವರ್ಗದವರು ಮತ್ತು ನಿವೃತ್ತ ಯೋಧರು ತಮಗಿದ್ದ ಆಸ್ತಿ ಮಾರಿ, ಚಿನ್ನಾಭರಣ ಅಡವಿಟ್ಟು ಹಾಗೂ ಬ್ಯಾಂಕುಗಳಲ್ಲಿ ಸಾಲ ಮಾಡಿ ಕೋಟಿ ಕೋಟಿ ರೂಪಾಯಿಗಳನ್ನು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ಇದೀಗ ಮುಖ್ಯಸ್ಥನೇ ಸಿಕ್ಕಿಬಿದ್ದಿರುವುದರಿಂದ ತ ತಾವು ಕಷ್ಟಪಟ್ಟು ದುಡಿದು ಹೂಡಿದ ಹಣ ವಾಪಸ್ ಸಿಗುತ್ತದೋ ಇಲ್ಲವೋ ಎಂಬ ಕಳವಳ ಹೂಡಿಕೆದಾರರನ್ನು ತೀವ್ರವಾಗಿ ಕಾಡಲಾರಂಭಿಸಿದೆ. ತನಿಖಾಧಿಕಾರಿಗಳು ಇಂಚಿಂಚೂ ಶೋಧ ನಡೆಸುತ್ತಿದ್ದು, ವಂಚನೆಯ ಜಾಲ ಎಷ್ಟು ದೊಡ್ಡದಿದೆ ಎಂಬುದು ಸಾರ್ವಜನಿಕರ ನಿದ್ದೆಗೆಡಿಸಿದೆ.
ಕಚೇರಿ ಮತ್ತು ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿದ ಬೆನ್ನಲ್ಲೇ ಶಿವಾನಂದ ನೀಲಣ್ಣವರ್ ಅವರಿಂದ ಬಿಡುಗಡೆಯಾಗಿದೆ ಎನ್ನಲಾದ ಆಡಿಯೋ ಹೂಡಿಕೆದಾರರಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹಿಂದಿ ಭಾಷೆಯಲ್ಲಿ ಮಾತನಾಡಿರುವ ಶಿವಾನಂದ ನೀಲಣ್ಣವರ್, "ನಾನು ಮನೆಯಲ್ಲಿ ಆರಾಮವಾಗಿದ್ದೇನೆ. ಪರಿಸ್ಥಿತಿ ಮೊದಲು ಹೇಗಿತ್ತೋ, ಇನ್ನೆರಡು ದಿನಗಳಲ್ಲಿ ಮತ್ತೆ ಹಾಗೇ ಆಗುತ್ತದೆ. ಯಾರು ಕೂಡ ತಲೆಕೆಡಿಸಿಕೊಳ್ಳಬೇಡಿ, ಭಯಪಡುವ ಅಗತ್ಯವೇ ಇಲ್ಲ. ನಾನಿದ್ದೇನೆ, ಯಾರೂ ಒತ್ತಡಕ್ಕೆ ಒಳಗಾಗಬೇಡಿ. ಮುಖ್ಯವಾಗಿ ಧೈರ್ಯವಾಗಿ ಮತ್ತು ಗಟ್ಟಿಯಾಗಿರಿ," ಎಂದು ಹೂಡಿಕೆದಾರರಿಗೆ ಧೈರ್ಯ ತುಂಬುವ ಭರವಸೆಯ ಸಂದೇಶ ರವಾನಿಸಿದ್ದಾನೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಈ ಸಂಸ್ಥೆಯನ್ನು ಇದಕ್ಕಿಂತಲೂ ಅತ್ಯುತ್ತಮವಾಗಿ ನಡೆಸಿಕೊಂಡು ಹೋಗುತ್ತೇನೆ ಎಂದೂ ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಇನ್ನೊಂದೆಡೆ, ಬೆಳಗಾವಿ ಪೊಲೀಸರು ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳ ತಂಡ ಶಿವಾನಂದನ ಕಚೇರಿಯಲ್ಲಿ ಇಂಚಿಂಚೂ ಶೋಧ ಕಾರ್ಯ ನಡೆಸಿದ್ದು, ಅಲ್ಲಿ ಪತ್ತೆಯಾದ ದಾಖಲೆಗಳನ್ನು ಕಂಡು ಸ್ವತಃ ದಂಗಾಗಿದ್ದಾರೆ. ಕಚೇರಿಯಲ್ಲಿ ರಾಶಿ ರಾಶಿ ಬಾಂಡ್ ಪೇಪರ್‌ಗಳು ಮತ್ತು ಚೆಕ್ ಬುಕ್‌ಗಳು ಪತ್ತೆಯಾಗಿವೆ. ಕೇವಲ ಒಂದೇ ವಾರದಲ್ಲಿ ಬರೋಬ್ಬರಿ 50 ಕೋಟಿ ರೂಪಾಯಿ ಹೊಸ ಹೂಡಿಕೆ ಸಂಗ್ರಹಿಸುವ ಬೃಹತ್ ಯೋಜನೆಯನ್ನು ಸಂಸ್ಥೆ ಹೊಂದಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೊಸದಾಗಿ ಹೂಡಿಕೆ ಮಾಡುವ ಸಾರ್ವಜನಿಕರಿಗೆ ನೀಡಲು ಮುಂಚಿತವಾಗಿಯೇ ಸಹಿ ಮಾಡಿ ಸಿದ್ಧವಾಗಿಟ್ಟುಕೊಂಡಿದ್ದ ಸುಮಾರು 3,700ಕ್ಕೂ ಹೆಚ್ಚು ಚೆಕ್‌ಗಳು ಹಾಗೂ ನೂರಾರು ಬಾಂಡ್ ಪೇಪರ್‌ಗಳನ್ನು ಪೊಲೀಸರು ದಾಳಿಯ ವೇಳೆ ಜಪ್ತಿ ಮಾಡಿದ್ದಾರೆ.
ಪ್ರಸ್ತುತ ಪೊಲೀಸ್ ವಶದಲ್ಲಿರುವ ಆರೋಪಿ ಶಿವಾನಂದ ನೀಲಣ್ಣವರ್ ತನಿಖೆಯ ವೇಳೆ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾನೆ ಎನ್ನಲಾಗಿದೆ. ಮಾಧ್ಯಮಗಳ ಹಾಗೂ ಪೊಲೀಸರ ಎದುರು ಪ್ರತಿಕ್ರಿಯಿಸಿರುವ ಆತ, "ಇದು ಸತ್ಯವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರಿಗೂ ಖುಷಿ ಸಿಗಲಿ. ಇಡೀ ಭಾರತದ ಜನತೆಗೆ ಒಳ್ಳೆಯದಾಗಲಿ, ಓಂ ನಮಃ ಶಿವಾಯ," ಎಂದು ಕೈಮುಗಿದು ವಿಚಿತ್ರವಾಗಿ ವರ್ತಿಸಿದ್ದಾನೆ. ಆರ್‌ಬಿಐ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ನಡೆಸಿರುವ ಈ ಬೃಹತ್ ಆರ್ಥಿಕ ವಂಚನೆ ಪ್ರಕರಣದ ತನಿಖೆಯನ್ನು ಮುಂದಿನ ದಿನಗಳಲ್ಲಿ ಸಿಐಡಿಗೆ ವಹಿಸುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.