ಬೆಂಗಳೂರು : ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಖಾಸಗಿ ಬಸ್ ಪ್ರಯಾಣಿಕರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಇಂಧನ ವೆಚ್ಚ ತೀವ್ರವಾಗಿ ಹೆಚ್ಚಳವಾಗಿರುವುದರಿಂದ ಬಸ್ ಕಾರ್ಯಾಚರಣೆ ದುಬಾರಿಯಾಗಿದೆ ಎಂದು ತಿಳಿಸಿರುವ ಖಾಸಗಿ ಬಸ್ ಮಾಲೀಕರು, ಬಸ್ ಟಿಕೆಟ್ ದರವನ್ನು ಇಂದಿನ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಶೇ. 20 ರಿಂದ 30 ರಷ್ಟು ಹೆಚ್ಚಿಸಲು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರ ಮತ್ತು ಖಾಸಗಿ ಬಸ್ ಮಾಲೀಕರ ಈ ನಡೆ ರಾಜ್ಯದಾದ್ಯಂತ ದಿನನಿತ್ಯ ಪ್ರಯಾಣಿಸುವ ಲಕ್ಷಾಂತರ ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಲಿದ್ದು, ನೇರ ಆರ್ಥಿಕ ಹೊರೆ ಉಂಟುಮಾಡಲಿದೆ.
ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಲೇ ಜನಸಾಮಾನ್ಯರು ಈಗಾಗಲೇ ಸಂಕಷ್ಟ ಎದುರಿಸುತ್ತಿದ್ದು, ಇದೀಗ ಸಾರಿಗೆ ವೆಚ್ಚವೂ ದಿಢೀರ್ ಹೆಚ್ಚಾಗುತ್ತಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಬಸ್‌ಗಳ ನಿರ್ವಹಣೆ, ಚಾಲಕರು ಹಾಗೂ ನಿರ್ವಾಹಕರು ಸೇರಿದಂತೆ ಸಿಬ್ಬಂದಿಗಳ ವೇತನ ಹಾಗೂ ಇತರೆ ಕಾರ್ಯಾಚರಣಾ ವೆಚ್ಚಗಳನ್ನು ಸರಿದೂಗಿಸಲು ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘಟನೆಗಳು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿವೆ.
ಇಂದು ಬೆಳಿಗ್ಗೆಯಷ್ಟೇ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪರಿಷ್ಕರಣೆ ಮಾಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 3.27 ರೂಪಾಯಿ ಹಾಗೂ ಡೀಸೆಲ್ ದರ ಲೀಟರ್‌ಗೆ 3.12 ರೂಪಾಯಿಯಷ್ಟು ಭಾರೀ ಏರಿಕೆಯಾಗಿದೆ. ಇದರೊಂದಿಗೆ ದೇಶಾದ್ಯಂತ ಸಿಎನ್‌ಜಿ ದರವನ್ನೂ ಸಹ ಪ್ರತಿ ಕೆಜಿಗೆ 2 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಹಾರ್ಮುಜ್ ಜಲಸಂಧಿ ದಿಗ್ಬಂಧನದಿಂದಾಗಿ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯವೇ ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಖಾಸಗಿ ಬಸ್ ಟಿಕೆಟ್ ದರದಲ್ಲಿ ದಿಢೀರ್ ಶೇ. 30 ರಷ್ಟು ಹೆಚ್ಚಳವಾಗಿರುವುದರಿಂದ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ದೂರದ ಊರುಗಳಿಗೆ ಪ್ರಯಾಣಿಸುವ ಸಾಮಾನ್ಯ ಜನರಿಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟ ಎದುರಾಗಲಿದೆ. ಸತತ ಬೆಲೆ ಏರಿಕೆಯ ಹೊಡೆತದಿಂದ ಕಂಗಾಲಾಗಿರುವ ಸಾರ್ವಜನಿಕ ವಲಯದಲ್ಲಿ ಖಾಸಗಿ ಬಸ್‌ಗಳ ಈ ದರ ಏರಿಕೆ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.