image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೃಷಿ ಜಮೀನು ಇಲ್ಲದಿದ್ದರೂ ಬಂದೂಕು ಪರವಾನಗಿ ಪಡೆಯಲು ಅವಕಾಶ: ಹೈಕೋರ್ಟ್ ಮಹತ್ವದ ಆದೇಶ

ಕೃಷಿ ಜಮೀನು ಇಲ್ಲದಿದ್ದರೂ ಬಂದೂಕು ಪರವಾನಗಿ ಪಡೆಯಲು ಅವಕಾಶ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ​ಬಂದೂಕು ಪರವಾನಗಿಯನ್ನು ನವೀಕರಿಸುವಾಗ ಕೃಷಿ ಜಮೀನು ಅಥವಾ ಆಸ್ತಿಯ ಮಾಲೀಕತ್ವವನ್ನು ಕಡ್ಡಾಯವಾಗಿ ಹೊಂದುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೃಷಿ ಜಮೀನು ಇಲ್ಲ ಎಂಬ ಏಕೈಕ ಕಾರಣಕ್ಕೆ ಬಂದೂಕು ಪರವಾನಗಿ ನವೀಕರಣವನ್ನು ನಿರಾಕರಿಸುವುದು ಕಾನೂನುಬಾಹಿರ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠವು ಸ್ಪಷ್ಟಪಡಿಸಿದೆ. ಮಂಗಳೂರಿನ ಗ್ರೆಗೋರಿ ಎಫ್ ಪೆರಿಸ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಪರವಾನಗಿ ನವೀಕರಣಕ್ಕೆ ನಿರಾಕರಿಸಿದ್ದ ಮಂಗಳೂರು ಪೊಲೀಸ್ ಆಯುಕ್ತರ ಆದೇಶವನ್ನು ರದ್ದುಗೊಳಿಸಿದೆ.

​ಕಳೆದ ಮೂರು ದಶಕಗಳಿಂದ 12 ಬೋರ್ ಎಸ್‌ಬಿಬಿಎಲ್ (SBBL) ಶಸ್ತ್ರಾಸ್ತ್ರದ ಪರವಾನಗಿ ಹೊಂದಿದ್ದ ಅರ್ಜಿದಾರರಿಗೆ, 2023ರ ಮಾರ್ಚ್‌ನಲ್ಲಿ ಕೃಷಿ ಜಮೀನು ಇಲ್ಲ ಎಂಬ ಕಾರಣ ನೀಡಿ ಪರವಾನಗಿ ನವೀಕರಿಸಲು ಪೊಲೀಸ್ ಆಯುಕ್ತರು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಿಗೆ ಈಗ ನ್ಯಾಯ ಸಿಕ್ಕಿದೆ. 1959ರ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಯಾವುದೇ ವ್ಯಕ್ತಿಯು ಸಾಕಷ್ಟು ಆಸ್ತಿ ಅಥವಾ ಕೃಷಿ ಜಮೀನು ಹೊಂದಿಲ್ಲ ಎಂಬ ಕಾರಣಕ್ಕೆ ಪರವಾನಗಿ ನಿರಾಕರಿಸಲು ಅವಕಾಶವಿಲ್ಲ. ಕಾಯ್ದೆಯಲ್ಲಿ ಉಲ್ಲೇಖಿಸದ ಹೊಸ ಷರತ್ತುಗಳನ್ನು ವಿಧಿಸುವ ಅಧಿಕಾರ ಅಧಿಕಾರಿಗಳಿಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

​ಅರ್ಜಿದಾರರು ಕಳೆದ 30 ವರ್ಷಗಳಿಂದ ಶಸ್ತ್ರಾಸ್ತ್ರ ಹೊಂದಿದ್ದರೂ, ಅದನ್ನು ದುರ್ಬಳಕೆ ಮಾಡಿದ ಅಥವಾ ಯಾವುದೇ ಬೆದರಿಕೆ ಹಾಕಿದ ಉದಾಹರಣೆಗಳಿಲ್ಲ ಎಂಬ ಅಂಶವನ್ನು ನ್ಯಾಯಪೀಠವು ಪರಿಗಣಿಸಿದೆ. ಇಂತಹ ಸಂದರ್ಭದಲ್ಲಿ ಕೇವಲ ಜಮೀನಿನ ದಾಖಲೆಗಳಿಗಾಗಿ ಹಠ ಹಿಡಿಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೃಷಿ ಜಮೀನಿನ ದಾಖಲೆಗಳನ್ನು ಒತ್ತಾಯಿಸದೆ ಅರ್ಜಿದಾರರ ಪರವಾನಗಿ ನವೀಕರಣ ಅರ್ಜಿಯನ್ನು ಮರು ಪರಿಶೀಲಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಈ ಆದೇಶವು ಆಸ್ತಿ ಹೊಂದಿಲ್ಲದಿದ್ದರೂ ಆತ್ಮರಕ್ಷಣೆಗಾಗಿ ಪರವಾನಗಿ ಹೊಂದಿರುವ ಅನೇಕರಿಗೆ ನೆಮ್ಮದಿ ತಂದಿದೆ.

Category
ಕರಾವಳಿ ತರಂಗಿಣಿ