image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿ-ಖಾತಾ ಮಾಲೀಕರಿಗೆ ಶೇ. 2ಕ್ಕೆ ಶುಲ್ಕ ಇಳಿಕೆ, ಮೇ 16ರಿಂದ ‘ನನ್ನ ಖಾತಾ ನನ್ನ ಹಕ್ಕು’ ಅಭಿಯಾನ ಆರಂಭ

ಬಿ-ಖಾತಾ ಮಾಲೀಕರಿಗೆ ಶೇ. 2ಕ್ಕೆ ಶುಲ್ಕ ಇಳಿಕೆ, ಮೇ 16ರಿಂದ ‘ನನ್ನ ಖಾತಾ ನನ್ನ ಹಕ್ಕು’ ಅಭಿಯಾನ ಆರಂಭ

ಬೆಂಗಳೂರು : ​ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬಿ-ಖಾತಾ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಬಿ-ಖಾತಾವನ್ನು ಎ-ಖಾತಾವಾಗಿ ಪರಿವರ್ತಿಸಲು ವಿಧಿಸಲಾಗುತ್ತಿದ್ದ ಮಾರ್ಗಸೂಚಿ ದರದ ಶುಲ್ಕವನ್ನು ಶೇ. 5ರಿಂದ ಶೇ. 2ಕ್ಕೆ ಇಳಿಕೆ ಮಾಡಿದೆ. ಈ ರಿಯಾಯಿತಿಯು ಮುಂದಿನ 100 ದಿನಗಳವರೆಗೆ ಮಾತ್ರ ಅನ್ವಯವಾಗಲಿದ್ದು, ಸಾರ್ವಜನಿಕರು ಈ ಅವಧಿಯೊಳಗೆ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದಾಗಿದೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಯನ್ನು ಸರ್ಕಾರದ ‘ಆರನೇ ಗ್ಯಾರಂಟಿ’ ಎಂದು ಬಣ್ಣಿಸಿದ್ದು, ಮೇ 16ರಿಂದ ನಗರದಾದ್ಯಂತ ‘ನನ್ನ ಖಾತಾ ನನ್ನ ಹಕ್ಕು’ ಎಂಬ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಈ ಅಭಿಯಾನದ ಮೂಲಕ ಸುಮಾರು 23 ಲಕ್ಷ ಆಸ್ತಿ ಮಾಲೀಕರಿಗೆ ಅವರ ಮನೆ ಬಾಗಿಲಿಗೇ ದಾಖಲೆಗಳನ್ನು ತಲುಪಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ 16 ಲಕ್ಷ ಎ-ಖಾತಾ ಮತ್ತು 7 ಲಕ್ಷ ಬಿ-ಖಾತಾ ಆಸ್ತಿಗಳು ಒಳಗೊಂಡಿವೆ.

​ಆಸ್ತಿಗಳ ಡಿಜಿಟಲೀಕರಣಕ್ಕಾಗಿ ಆಧಾರ್, ಫೋನ್ ಸಂಖ್ಯೆ ಮತ್ತು ಗೂಗಲ್ ಲೊಕೇಶನ್ ಬಳಸಿ ಡಿಜಿಟಲ್ ಮ್ಯಾಪಿಂಗ್ ಮಾಡಲಾಗುತ್ತಿದ್ದು, ಈಗಾಗಲೇ 7 ಸಾವಿರ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಮುಂದಿನ ಮೂರು ತಿಂಗಳವರೆಗೆ ಪ್ರತಿ ಶನಿವಾರ ಆಯಾ ವಿಧಾನಸಭಾ ಕ್ಷೇತ್ರಗಳ ನಿಗದಿತ ಕೇಂದ್ರಗಳಲ್ಲಿ ಈ ಕಾರ್ಯ ನಡೆಯಲಿದೆ. ಇದರ ಜೊತೆಗೆ, ನಗರ ಯೋಜನಾ ವಿಭಾಗವು ಅಕ್ರಮ ಕಟ್ಟಡಗಳ ಸೆಟ್ ಬ್ಯಾಕ್ ನಿಯಮ ಉಲ್ಲಂಘನೆಯ ಮಿತಿಯನ್ನು ಶೇ. 5ರಿಂದ ಶೇ. 15ಕ್ಕೆ ಹೆಚ್ಚಿಸಿರುವುದು ಸಣ್ಣ ನಿವೇಶನದಾರರಿಗೆ ದೊಡ್ಡ ಸಮಾಧಾನ ತಂದಿದೆ. ಇನ್ನು ಶಿವರಾಮ ಕಾರಂತ ಬಡಾವಣೆಯ ಸಂತ್ರಸ್ತ 3,052 ಭೂಮಾಲೀಕರಿಗೆ ಮೇ 16ರಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ವೈಟ್‌ಫೀಲ್ಡ್‌ನಲ್ಲಿ ಬಿಡಿಎ ನಿರ್ಮಿಸಿರುವ 1,900 ಮನೆಗಳ ಮಾರಾಟವು ಮೇ 15ರಿಂದಲೇ ಶುರುವಾಗಲಿದೆ.

​ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ಬೆಂಗಳೂರು ಬಿಸಿನೆಸ್ ಕಾರಿಡಾರ್‌ನ ಮೊದಲ ಹಂತದ ಟೆಂಡರ್ ಪೂರ್ಣಗೊಂಡಿದ್ದು, ಹೊಸೂರು ರಸ್ತೆಯಿಂದ ಮೈಸೂರು ರಸ್ತೆಯವರೆಗಿನ 33 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಬ್ಬಾಳದಿಂದ ಕೃಷಿ ವಿವಿವರೆಗೆ 2.2 ಕಿ.ಮೀ. ಟನಲ್ ರಸ್ತೆ ಮತ್ತು ಮೇಕ್ರಿ ಸರ್ಕಲ್ ಬಳಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಲಿದ್ದು, 18 ತಿಂಗಳೊಳಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ. ಪರಿಸರ ಸಂರಕ್ಷಣೆಗಾಗಿ ಕೆಂಪೇಗೌಡ ಜಯಂತಿಯಂದು ‘ಗ್ರೀನ್ ಬೆಂಗಳೂರು’ ಯೋಜನೆಯಡಿ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನಕ್ಕೂ ಸರ್ಕಾರ ಸಜ್ಜಾಗಿದೆ.

Category
ಕರಾವಳಿ ತರಂಗಿಣಿ