image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಸಿಹಿ ಸುದ್ದಿ: ಶೇ. 12.50 ರಷ್ಟು ವೇತನ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಸಿಹಿ ಸುದ್ದಿ: ಶೇ. 12.50 ರಷ್ಟು ವೇತನ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಯ ನೌಕರರ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ರಾಜ್ಯ ಸರ್ಕಾರ, ನಾಲ್ಕು ರಸ್ತೆ ಸಾರಿಗೆ ನಿಗಮಗಳ ಎಲ್ಲಾ ವೇತನ ಶ್ರೇಣಿಯ ನೌಕರರ ವೇತನವನ್ನು ಶೇ. 12.50 ರಷ್ಟು ಹೆಚ್ಚಿಸಿ ಇಂದು ಮಹತ್ವದ ಆದೇಶ ಹೊರಡಿಸಿದೆ. ಏಪ್ರಿಲ್ 1, 2025ರಿಂದ ಪೂರ್ವಾನ್ವಯವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (KKRTC) ಅಧಿಕಾರಿಗಳು ಮತ್ತು ನೌಕರರ ವೇತನ ಪರಿಷ್ಕರಣೆಯಾಗಲಿದೆ. ಸಾರಿಗೆ ನೌಕರರ ಸಂಘಟನೆಗಳು ಶೇ. 25 ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದವು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ನಡೆಸಿದ ಸಭೆಗಳಲ್ಲೂ ಇದೇ ಬೇಡಿಕೆಯನ್ನು ಬಲವಾಗಿ ಮಂಡಿಸಿದ್ದವು. ಆದರೂ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈಗ ಶೇ. 12.50 ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ.

​ಈ ನೂತನ ಆದೇಶದ ಅನ್ವಯ 2025ರ ಮಾರ್ಚ್ 31ರಂದು ನೌಕರರು ಪಡೆಯುತ್ತಿದ್ದ ಮೂಲ ವೇತನಕ್ಕೆ ಶೇ. 12.50 ರಷ್ಟು ಹೆಚ್ಚಳವಾಗಲಿದ್ದು, ಆಯ್ಕೆ ಶ್ರೇಣಿ ಸೇರಿದಂತೆ ಎಲ್ಲಾ ವೇತನ ಶ್ರೇಣಿಗಳು ಪರಿಷ್ಕೃತಗೊಳ್ಳಲಿವೆ. ಈ ಪರಿಷ್ಕೃತ ವೇತನವು ಜುಲೈ 1, 2026ರಿಂದ ನೌಕರರ ಕೈ ಸೇರಲಿದ್ದು, ಏಪ್ರಿಲ್ 2025ರಿಂದ ಜೂನ್ 2026ರವರೆಗಿನ ಬಾಕಿ ಮೊತ್ತವನ್ನು (Arrears) ಸಂಸ್ಥೆಗಳ ಆರ್ಥಿಕ ಚೇತರಿಕೆಗೆ ಅನುಗುಣವಾಗಿ ಹಂತ ಹಂತವಾಗಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಈ ನಿರ್ಧಾರದಿಂದ ರಾಜ್ಯದ ಸುಮಾರು 1.05 ಲಕ್ಷ ಸಾರಿಗೆ ಸಿಬ್ಬಂದಿಗೆ ಅನುಕೂಲವಾಗಲಿದ್ದು, ನಿಗಮಗಳಿಗೆ ವಾರ್ಷಿಕವಾಗಿ 873.64 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆ ಬೀಳಲಿದೆ. ಈಗಾಗಲೇ 2023ರ ವೇತನ ಪರಿಷ್ಕರಣೆಯ ಬಾಕಿ ಮೊತ್ತದ ಮೊದಲ ಕಂತಾಗಿ 450 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ