image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಜೆಪಿ ಕಾರ್ಯಕರ್ತರೇ ಪಕ್ಷದ ನಿಜವಾದ ಮಾಲೀಕರು: ಡಾ. ಸಿ.ಟಿ. ರವಿ

ಬಿಜೆಪಿ ಕಾರ್ಯಕರ್ತರೇ ಪಕ್ಷದ ನಿಜವಾದ ಮಾಲೀಕರು: ಡಾ. ಸಿ.ಟಿ. ರವಿ

ಕುಶಾಲನಗರ: ಬಿಜೆಪಿಯು ಕೇವಲ ವ್ಯವಸ್ಥಾ ಪರಿವರ್ತನೆಯಲ್ಲ, ಬದಲಾಗಿ ಸಮಾಜ ಪರಿವರ್ತನೆಯ ಮೇಲೂ ನಂಬಿಕೆ ಇಟ್ಟಿರುವ ರಾಜಕೀಯ ಪಕ್ಷ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಅವರು ಪ್ರತಿಪಾದಿಸಿದರು. ಕೊಡಗು ಜಿಲ್ಲೆಯ ಕುಶಾಲನಗರದ ಕೂರ್ಗ್ ನೇಚರ್ ಬ್ಲಿಸ್ ರೆಸಾರ್ಟ್‌ನಲ್ಲಿ ಬಿಜೆಪಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  

​ತಾಯಿ ಭಾರತಿಯನ್ನು ವಿಶ್ವಗುರುವನ್ನಾಗಿಸುವುದೇ ಬಿಜೆಪಿಯ ಅಂತಿಮ ಗುರಿಯಾಗಿದೆ ಎಂದು ತಿಳಿಸಿದ ಅವರು, ಬಡತನ ನಿರ್ಮೂಲನೆ ಎಂದರೆ ಬಡವರನ್ನು ದೂರ ಮಾಡುವುದಲ್ಲ, ಬದಲಾಗಿ ಅವರನ್ನು ಬಲಿಷ್ಠರನ್ನಾಗಿಸುವುದಾಗಿದೆ ಎಂದರು. ಇದೇ ಉದ್ದೇಶದಿಂದ ಕೇಂದ್ರ ಸರ್ಕಾರವು ಅಂತ್ಯೋದಯ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ವಿವರಿಸಿದರು. ಭಾರತದ ವೇದಗಳು, ಉಪನಿಷತ್ತುಗಳು ಅಥವಾ ವಚನ ಸಾಹಿತ್ಯದ ಯಾವುದೇ ದಾರ್ಶನಿಕ ಪರಂಪರೆಯೂ ಅಸ್ಪೃಶ್ಯತೆ ಹಾಗೂ ಜಾತಿಯತೆಯನ್ನು ಸಮರ್ಥಿಸಿಲ್ಲ. ಇವು ಸಮಾಜದೊಳಗೆ ಬೆಳೆದಿರುವುದು ನಮ್ಮ ದುರ್ಬಲತೆಯ ಸಂಕೇತವಾಗಿದ್ದು, ಸಮಾಜ ಪರಿವರ್ತನೆಯ ಮೂಲಕವೇ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.  

​ಪಂಡಿತ್ ದೀನದಯಾಳ್ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನವು ಬಿಜೆಪಿಗೆ ಸೈದ್ಧಾಂತಿಕ ನೆಲೆಯಾಗಿದೆ. ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷವಾಗಿದ್ದು, ಸಾಮಾನ್ಯ ಕಾರ್ಯಕರ್ತರೂ ಕೂಡ ಉನ್ನತ ನಾಯಕತ್ವಕ್ಕೆ ಬೆಳೆಯುವ ಅವಕಾಶ ಇಲ್ಲಿದೆ. ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬರು ಇಂದು ದೇಶದ ಪ್ರಧಾನಮಂತ್ರಿಯಾಗಿರುವುದು ಬಿಜೆಪಿ ಸಂಘಟನೆಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳಲ್ಲಿ ಕುಟುಂಬಗಳೇ ಮಾಲೀಕರಾಗಿದ್ದು, ನಾಯಕತ್ವವು ಕುಟುಂಬ ಕೇಂದ್ರಿತವಾಗಿದೆ. ಆದರೆ ಬಿಜೆಪಿಯಲ್ಲಿ ಕಾರ್ಯಕರ್ತರೇ ಪಕ್ಷದ ನಿಜವಾದ ಮಾಲೀಕರಾಗಿದ್ದು, ಯಾವುದೇ ನಾಯಕರು ತಮ್ಮನ್ನು ತಾವು ಮಾಲೀಕರೆಂದು ಸ್ಥಾಪಿಸಿಕೊಳ್ಳಲು ಪ್ರಯತ್ನಿಸಿಲ್ಲ. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಹಾಗೂ ನರೇಂದ್ರ ಮೋದಿಯವರಂತಹ ಜನನಾಯಕರು ಕಾರ್ಯಕರ್ತರ ನಾಯಕತ್ವದ ಪರಂಪರೆಯನ್ನು ಬಲಪಡಿಸಿದ್ದಾರೆ ಎಂದು ಅವರು ಸ್ಮರಿಸಿದರು.  

​ಅಭ್ಯಾಸ ವರ್ಗಗಳು ಕಾರ್ಯಕರ್ತರನ್ನು ಸೈದ್ಧಾಂತಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಬಲಪಡಿಸುವ ವೇದಿಕೆಗಳಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಶಿಸ್ತು, ಸಾಮೂಹಿಕತೆ ಮತ್ತು ಸಂಘಟನಾ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಸಚಿವ ಅಪ್ಪಚ್ಚು ರಂಜನ್ ಹಾಗೂ ಹಲವು ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ