image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಬಿ. ಗೋಪಿನಾಥ್ ಒತ್ತಾಯ

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಬಿ. ಗೋಪಿನಾಥ್ ಒತ್ತಾಯ

ಶಿವಮೊಗ್ಗ: ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿಯೇ ಸ್ಥಾಪಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಿ. ಗೋಪಿನಾಥ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಂಚಾರಿ ಪೀಠವನ್ನು ಬೇರೆ ಯಾವುದೇ ಜಿಲ್ಲೆಗೆ ವರ್ಗಾಯಿಸಬಾರದು ಎಂದು ಆಗ್ರಹಿಸಿ ವಕೀಲರ ಸಂಘ ನಡೆಸುತ್ತಿರುವ ಹೋರಾಟಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಕಂಠೀರವ ಸ್ಟುಡಿಯೋಸ್ ಅಧ್ಯಕ್ಷರ ಆಶಯದಂತೆ ಹಾರನಹಳ್ಳಿ ಹೋಬಳಿಯ ಜಾಜುಹಳ್ಳಿ ಗ್ರಾಮದಲ್ಲಿ ಲಭ್ಯವಿರುವ 25 ಎಕರೆ ಜಮೀನನ್ನು ಸ್ಟುಡಿಯೋದ ನೂತನ ಘಟಕ ಸ್ಥಾಪಿಸಲು ಮಂಜೂರು ಮಾಡಬೇಕು. ಶಿವಮೊಗ್ಗದ ನೈಸರ್ಗಿಕ ಸೌಂದರ್ಯವು ಹೊರಾಂಗಣ ಚಿತ್ರೀಕರಣಕ್ಕೆ ಪೂರಕವಾಗಿದ್ದು, ಉಡುಪಿ, ಮಂಗಳೂರು ಮತ್ತು ಕಾರವಾರ ಜಿಲ್ಲೆಗಳಿಗೆ ಸಮೀಪವಿರುವ ಕಾರಣ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳು ತಕ್ಷಣವೇ ಭೂಮಿ ಮಂಜೂರು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.  

​ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ವಿಮಾನ ಸಂಚಾರ ಸೇವೆ ನಿರಂತರವಾಗಿ ಮುಂದುವರಿಯಬೇಕು ಹಾಗೂ ಶಿವಮೊಗ್ಗ ನಗರದಲ್ಲಿ ರಾಜ್ಯ ನೌಕರರ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯನ್ನು ತೆರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದರೊಂದಿಗೆ ಸರಕು ಮತ್ತು ಸೇವಾ ತೆರಿಗೆ (GST) ಮೇಲ್ಮನವಿ ನ್ಯಾಯಮಂಡಳಿ ಸ್ಥಾಪನೆ, ಶುದ್ಧ ಕುಡಿಯುವ ನೀರು ಸರಬರಾಜು ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಸೋಗಾನೆ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 71ನೇ ಶಾಖೆಯನ್ನು ಶಿವಮೊಗ್ಗದಲ್ಲಿ ತೆರೆಯುವ ಮೂಲಕ ರಾಜ್ಯದ ಪ್ರಮುಖ ಕೈಗಾರಿಕಾ ಸಂಸ್ಥೆಯಾದ ನಿರಾಣಿ ಗ್ರೂಪ್ ಶಿವಮೊಗ್ಗಕ್ಕೆ ಕಾಲಿಟ್ಟಿದೆ. ನಿರಾಣಿ ಸಮೂಹವು ಶಿವಮೊಗ್ಗದಲ್ಲಿ ವಿದ್ಯುತ್, ಕೃಷಿ ಆಧಾರಿತ ಕೈಗಾರಿಕೆ, ಶಿಕ್ಷಣ, ಆರೋಗ್ಯ, ಬಯೋ ಫ್ಯುಯೆಲ್ ಹಾಗೂ ಜೈವಿಕ ಪ್ಲಾಸ್ಟಿಕ್ ಉತ್ಪಾದನೆಯಂತಹ ಪರಿಸರ ಸ್ನೇಹಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ. ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ಸರ್ಕಾರಕ್ಕೆ ಸಹಕರಿಸಲು ಸಂಘವು ಸದಾ ಸಿದ್ಧವಿದೆ ಎಂದು ಗೋಪಿನಾಥ್ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ