ಶೃಂಗೇರಿ : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಪ್ರಶ್ನಿಸಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಪ್ರಕರಣದಲ್ಲಿ 'ಯಥಾಸ್ಥಿತಿ' (Status Quo) ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವುದರಿಂದ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಒಂದೇ ವಾರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ.
ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಇಂದು ನಡೆದ ವಿಚಾರಣೆಯ ವೇಳೆ ರಾಜೇಗೌಡರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಪ್ರಬಲ ವಾದ ಮಂಡಿಸಿದರು. ಮರುಎಣಿಕೆಯ ಸಂದರ್ಭದಲ್ಲಿ ಪಾರದರ್ಶಕತೆ ಇರಲಿಲ್ಲ ಮತ್ತು ಚುನಾವಣಾ ಆಯೋಗದ ನಡವಳಿಕೆಯಲ್ಲಿ ದೋಷಗಳಿವೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಮುಖವಾಗಿ, ಸ್ಟ್ರಾಂಗ್ ರೂಂಗಳಿಗೆ ಸರಿಯಾದ ಸೀಲ್ ಇಲ್ಲದಿದ್ದುದು, ಬ್ಯಾಲೆಟ್ ಟ್ರಂಕ್‌ಗಳು ಮೊದಲೇ ತೆರೆದಿದ್ದ ಸ್ಥಿತಿಯಲ್ಲಿದ್ದದ್ದು ಮತ್ತು 2023ರಲ್ಲಿ ಸಿಂಧು ಎಂದು ಪರಿಗಣಿಸಲ್ಪಟ್ಟ ಮತಗಳು ಈಗ ಅಸಿಂಧುವಾದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಲಾಯಿತು. ತರಾತುರಿಯಲ್ಲಿ ಫಲಿತಾಂಶ ಘೋಷಿಸಿರುವ ಬಗ್ಗೆಯೂ ಕೋರ್ಟ್ ಗಮನಕ್ಕೆ ತರಲಾಯಿತು.
ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಇದರಿಂದಾಗಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರೇ ಶಾಸಕರಾಗಿ ಮುಂದುವರಿಯಲಿದ್ದು, ಇತ್ತೀಚೆಗಷ್ಟೇ ಅಂಚೆ ಮತಗಳ ಮರುಎಣಿಕೆಯಲ್ಲಿ ಜಯಗಳಿಸಿದ್ದ ಡಿ.ಎನ್. ಜೀವರಾಜ್ ಅವರಿಗೆ ಭಾರಿ ಹಿನ್ನಡೆಯಾಗಿದೆ. ಈ ಬೆಳವಣಿಗೆಯಿಂದಾಗಿ ಶೃಂಗೇರಿ ಕ್ಷೇತ್ರದಲ್ಲಿ ರಾಜಕೀಯ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಮೇ 31ರ ವಿಚಾರಣೆಯು ಕ್ಷೇತ್ರದ ಅಂತಿಮ ಶಾಸಕರು ಯಾರು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.