image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವೀರಪ್ಪನ್ ಹತ್ಯೆ ಕಾರ್ಯಾಚರಣೆಯ 72 ಎಸ್‌ಟಿಎಫ್ ಸಿಬ್ಬಂದಿಗೆ ಬಿಗ್ ರಿಲೀಫ್: 2 ದಶಕಗಳ ಬಳಿಕ ಬಹುಮಾನ ನೀಡಲು ಹೈಕೋರ್ಟ್ ಐತಿಹಾಸಿಕ ಆದೇಶ

ವೀರಪ್ಪನ್ ಹತ್ಯೆ ಕಾರ್ಯಾಚರಣೆಯ 72 ಎಸ್‌ಟಿಎಫ್ ಸಿಬ್ಬಂದಿಗೆ ಬಿಗ್ ರಿಲೀಫ್: 2 ದಶಕಗಳ ಬಳಿಕ ಬಹುಮಾನ ನೀಡಲು ಹೈಕೋರ್ಟ್ ಐತಿಹಾಸಿಕ ಆದೇಶ

ಬೆಂಗಳೂರು : ​ದಶಕಗಳ ಕಾಲ ಕರುನಾಡು ಮತ್ತು ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಕಾಡುಗಳ್ಳ ವೀರಪ್ಪನ್ ಹತ್ಯೆಯಾಗಿ ಸುಮಾರು 22 ವರ್ಷಗಳೇ ಕಳೆಯುತ್ತಾ ಬಂದಿದ್ದರೂ, ಆ ಕಾರ್ಯಾಚರಣೆಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ್ದ ಅನೇಕ ಸಿಬ್ಬಂದಿಗೆ ಸರ್ಕಾರ ಘೋಷಿಸಿದ್ದ ಬಹುಮಾನ ಮಾತ್ರ ಇನ್ನೂ ತಲುಪಿರಲಿಲ್ಲ. ಈ ಸುದೀರ್ಘ ಕಾಯುವಿಕೆಗೆ ಈಗ ಕರ್ನಾಟಕ ಹೈಕೋರ್ಟ್ ಅಂತ್ಯ ಹಾಡಿದ್ದು, ಬಾಕಿ ಉಳಿದಿರುವ 72 ಎಸ್‌ಟಿಎಫ್ (STF) ಸಿಬ್ಬಂದಿಗೆ ಮೂರು ತಿಂಗಳ ಒಳಗಾಗಿ ಬಹುಮಾನದ ಮೊತ್ತ ಪಾವತಿಸುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಮಹತ್ವದ ನಿರ್ದೇಶನ ನೀಡಿದೆ.

​2004ರ ಅಕ್ಟೋಬರ್ 18ರಂದು ನಡೆದಿದ್ದ ಕಾರ್ಯಾಚರಣೆಯಲ್ಲಿ ವೀರಪ್ಪನ್ ಹತ್ಯೆಯಾಗಿತ್ತು. ಈ ಯಶಸ್ವಿ ಕಾರ್ಯಾಚರಣೆಯ ಬೆನ್ನಲ್ಲೇ 2005ರ ಜುಲೈ 8ರಂದು ರಾಜ್ಯ ಸರ್ಕಾರವು ಎಸ್‌ಟಿಎಫ್ ಸಿಬ್ಬಂದಿಗೆ ಬಹುಮಾನ ಘೋಷಿಸಿ ಆದೇಶ ಹೊರಡಿಸಿತ್ತು. ಆದರೆ, ಸರ್ಕಾರವು ಕೇವಲ ವೀರಪ್ಪನ್ ಕೊಲೆಯಾದ ದಿನ ಸ್ಥಳದಲ್ಲಿದ್ದ ಆರು ಮಂದಿಗೆ ಮಾತ್ರ ಬಹುಮಾನ ಸೀಮಿತಗೊಳಿಸಿ, ಉಳಿದವರಿಗೆ ಹಣದ ಕೊರತೆಯ ನೆಪವೊಡ್ಡಿತ್ತು. ಸರ್ಕಾರದ ಈ ನಡೆಯನ್ನು ತಾರತಮ್ಯದ ನಿರ್ಧಾರ ಎಂದು ಜರೆದಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠವು, ವೀರಪ್ಪನ್‌ನನ್ನು ಒಂದೇ ದಿನದಲ್ಲಿ ಯಾರೋ ಕೆಲವೇ ಸಿಬ್ಬಂದಿ ಹತ್ಯೆ ಮಾಡಿಲ್ಲ, ಇದರ ಹಿಂದೆ ನೂರಾರು ಸಿಬ್ಬಂದಿ ವರ್ಷಗಟ್ಟಲೆ ಕಾಡಿನಲ್ಲಿ ಜೀವನ ಪಣಕ್ಕಿಟ್ಟು ಮಾಹಿತಿ ಸಂಗ್ರಹಿಸಿದ್ದರು ಎಂದು ಅಭಿಪ್ರಾಯಪಟ್ಟಿದೆ.

​ಹೈಕೋರ್ಟ್ ನಿರ್ದೇಶನದಂತೆ ಈಗ ಅರಣ್ಯ ರಕ್ಷಕರು, ವಾಚರ್‌ಗಳು, ಚಾಲಕರು ಸೇರಿದಂತೆ ಒಟ್ಟು 72 ಮಂದಿಗೆ ಅವರು ಎಸ್‌ಟಿಎಫ್‌ನಲ್ಲಿ ಸಲ್ಲಿಸಿದ ಸೇವೆಯ ಅವಧಿಗೆ ಅನುಗುಣವಾಗಿ ಹಣ ಸಿಗಲಿದೆ. 3 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದವರಿಗೆ ₹3 ಲಕ್ಷ, 2 ರಿಂದ 3 ವರ್ಷಕ್ಕೆ ₹2 ಲಕ್ಷ, 1 ರಿಂದ 2 ವರ್ಷಕ್ಕೆ ₹1 ಲಕ್ಷ ಹಾಗೂ 1 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ ₹50,000 ಹಣ ಸಿಗಲಿದೆ. ಇದರೊಂದಿಗೆ ಇನ್‌ಸ್ಪೆಕ್ಟರ್ ಶ್ರೇಣಿಗಿಂತ ಕೆಳಗಿನವರಿಗೆ 30×40 ನಿವೇಶನ ಹಾಗೂ ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೆ 40×60 ನಿವೇಶನ ನೀಡುವ ಬಗ್ಗೆಯೂ ಸರ್ಕಾರ ಕ್ರಮ ವಹಿಸಬೇಕಿದೆ.

​ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮಾರ್ಮಿಕವಾಗಿ ಮಾತನಾಡಿದ್ದು, "ಸರ್ಕಾರವು ತಾನು ನೀಡಿದ ಮಾತನ್ನು ಉಳಿಸಿಕೊಳ್ಳಬೇಕೆ ವಿನಾ ಅದನ್ನು ಮುರಿಯಬಾರದು. ಸಾರ್ವಭೌಮ ರಾಜ್ಯವೊಂದು ನೀಡುವ ವಾಗ್ದಾನಕ್ಕೆ ತನ್ನದೇ ಆದ ಪವಿತ್ರತೆ ಇರುತ್ತದೆ" ಎಂದು ಹೇಳಿದೆ. ಈ ಹಿಂದೆ 17 ಮಂದಿಗೆ ಇದೇ ಮಾದರಿಯ ಪರಿಹಾರ ನೀಡಲು ಆದೇಶಿಸಲಾಗಿದ್ದು, ಈಗಿನ ಅರ್ಜಿದಾರರಿಗೂ ಅದೇ ನ್ಯಾಯ ಅನ್ವಯವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪಿನ ಮೂಲಕ ದಶಕಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದ ಮಾಜಿ ಎಸ್‌ಟಿಎಫ್ ಸಿಬ್ಬಂದಿಗೆ ಕೊನೆಗೂ ಜಯ ಸಿಕ್ಕಂತಾಗಿದೆ.

Category
ಕರಾವಳಿ ತರಂಗಿಣಿ