image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ ಐದು ದಿನ ಕರ್ನಾಟಕದಾದ್ಯಂತ ಗುಡುಗು ಸಹಿತ ಮಳೆ ಮುನ್ಸೂಚನೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ ಐದು ದಿನ ಕರ್ನಾಟಕದಾದ್ಯಂತ ಗುಡುಗು ಸಹಿತ ಮಳೆ ಮುನ್ಸೂಚನೆ

ಬೆಂಗಳೂರು : ​ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಮುಂದಿನ ಐದು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮನ್ನಾರ್ ಕೊಲ್ಲಿ ಮತ್ತು ಶ್ರೀಲಂಕಾ ಭಾಗದಲ್ಲಿ ಸಕ್ರಿಯವಾಗಿರುವ ಚಂಡಮಾರುತದ ಸುಳಿಗಾಳಿಯು ಮುಂದಿನ 48 ಗಂಟೆಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತವಾಗಿ ಮಾರ್ಪಡುವ ಸಾಧ್ಯತೆಯಿದೆ. ಇದರ ನೇರ ಪರಿಣಾಮವಾಗಿ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.

​ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 10 ರಿಂದ 14 ರವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಹಾವೇರಿ, ಗದಗ, ಧಾರವಾಡ ಮತ್ತು ಬೆಳಗಾವಿಯಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೇ 14 ರ ವೇಳೆಗೆ ಕಲಬುರಗಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಿಗೂ ಮಳೆ ವಿಸ್ತರಿಸಲಿದೆ. ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮೇ 10 ರಿಂದಲೇ ಮಳೆಯ ಅಬ್ಬರ ಶುರುವಾಗಲಿದ್ದು, ಮೇ 14 ರಿಂದ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಲಿದೆ.

​ತಾಪಮಾನದ ವಿಚಾರಕ್ಕೆ ಬಂದರೆ, ಮುಂದಿನ 5 ದಿನಗಳ ಕಾಲ ರಾಜ್ಯದ ಗರಿಷ್ಠ ತಾಪಮಾನದಲ್ಲಿ ದೊಡ್ಡ ಮಟ್ಟದ ಏರಿಳಿತ ಕಂಡುಬರುವುದಿಲ್ಲ. ಕರಾವಳಿಯಲ್ಲಿ ತಾಪಮಾನವು ವಾಡಿಕೆಗಿಂತ ಸ್ವಲ್ಪ ಹೆಚ್ಚಿದ್ದರೆ, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗುವ ಸಂಭವವಿದೆ. ಮೇ 14 ರವರೆಗೆ ಗುಡುಗು ಮತ್ತು ಮಿಂಚಿನ ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆಯು, ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಸುರಕ್ಷಿತವಾಗಿರುವಂತೆ ಸೂಚಿಸಿದೆ.

Category
ಕರಾವಳಿ ತರಂಗಿಣಿ