ಶಿವಮೊಗ್ಗ : ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಶಿವಮೊಗ್ಗ ಸಾಹಿತ್ಯ ಹಬ್ಬದ ಮೊದಲ ಆವೃತ್ತಿಯ ಎರಡನೇ ದಿನದಂದು, ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರ ಸಾಹಿತ್ಯವು ಕನ್ನಡ ಓದುಗರ ವಲಯವನ್ನು ಉಳಿಸಿ ಬೆಳೆಸಿದ ಪರಿಯ ಕುರಿತು ಅರ್ಥಪೂರ್ಣ ಸಂವಾದ ನಡೆಯಿತು. ಈ ಗೋಷ್ಠಿಯಲ್ಲಿ ಮಾತನಾಡಿದ ಕಾದಂಬರಿಕಾರ ಡಾ. ಅಜಕ್ಕಳ ಗಿರೀಶ್ ಭಟ್ ಅವರು, ಕುವೆಂಪು ಅವರದು ವರ್ಣನಾತ್ಮಕ ಶೈಲಿಯಾದರೆ, ಭೈರಪ್ಪನವರ ಕೃತಿಗಳು ಕಲಾತ್ಮಕತೆ ಮತ್ತು ವಿಚಾರಗಳ ಸಮ್ಮಿಶ್ರಣವಾಗಿವೆ ಎಂದು ಅಭಿಪ್ರಾಯಪಟ್ಟರು. ಅನಕೃ ಹಾಗೂ ಕಾರಂತರ ಕಾದಂಬರಿಗಳಲ್ಲಿ ರಸದ ಅಂಶಗಳು ಕಡಿಮೆ ಎಂದು ಭಾವಿಸುತ್ತಿದ್ದ ಭೈರಪ್ಪನವರು, ಭಾವದೊಂದಿಗೆ ವಿಚಾರಗಳನ್ನು ಮೇಳೈಸುವ ಮೂಲಕ ಜನಪ್ರಿಯತೆ ಗಳಿಸಿದರು. ಪ್ರಗತಿಶೀಲ ಮತ್ತು ನವ್ಯ ಕಾಲಘಟ್ಟದ ನಡುವೆ ವಿವಿ ಪ್ರಾಧ್ಯಾಪಕರ ಬರವಣಿಗೆಗಳು ಸಾಮಾನ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರದಿದ್ದ ಸಮಯದಲ್ಲಿ, ಸಾರ್ವಜನಿಕ ಲೈಬ್ರರಿಗಳ ಮೂಲಕ ಭೈರಪ್ಪನವರ ಕೃತಿಗಳು ಜನಸಾಮಾನ್ಯರನ್ನು ತಲುಪಿದವು.
ಮತ್ತೊಬ್ಬ ಕಾದಂಬರಿಕಾರ ಎಂ.ಆರ್. ದತ್ತಾತ್ರಿ ಮಾತನಾಡಿ, ಭೈರಪ್ಪನವರ ಸಾಹಿತ್ಯದಲ್ಲಿ ಮಾಸ್ತಿಯವರ ಕಥಾಹಂದರ, ಕಾರಂತರ ವಿಚಾರಧಾರೆ ಹಾಗೂ ಯಶವಂತ ಚಿತ್ತಾಲರ ಪಾತ್ರದ ಆಳಕ್ಕೆ ಇಳಿಯುವ ಗುಣಗಳೆಲ್ಲವೂ ಸಮ್ಮಿಳಿತಗೊಂಡಿವೆ ಎಂದು ಬಣ್ಣಿಸಿದರು. 50 ರಿಂದ 80ರ ದಶಕದ ಸ್ಥಿತ್ಯಂತರದ ಕಾಲದಲ್ಲಿ ಭೈರಪ್ಪನವರು ಧೀರ ಸಾಹಿತ್ಯ ರಚನೆ ಮಾಡಿದ್ದು, ನಾಲ್ಕು ತಲೆಮಾರುಗಳ ಓದುಗರನ್ನು ಸಂಪಾದಿಸಿದ್ದಾರೆ. ವಿಶೇಷವಾಗಿ 90ರ ದಶಕದ ಇಂಜಿನಿಯರ್‌ಗಳಲ್ಲಿ ಬಹುತೇಕರು ಭೈರಪ್ಪನವರ ಓದುಗರಾಗಿದ್ದರು ಎಂದು ಅವರು ಗುರುತಿಸಿದರು. ಯಾವುದೇ ಬಲವಂತವಿಲ್ಲದೆ, ಮನುಷ್ಯ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾದ ಇವರ ಕೃತಿಗಳು ಸಾರ್ವಕಾಲಿಕವಾಗಿ ಜನರನ್ನು ತಲುಪುತ್ತಿವೆ ಎಂದು ಗೋಷ್ಠಿಯಲ್ಲಿ ಆಶಯ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಸಮನ್ವಯಕಾರರಾಗಿ ಸಹನಾ ವಿಜಯಕುಮಾರ್ ಉಪಸ್ಥಿತರಿದ್ದರು.