image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಗೊಂದಲ ಒಂದು ತಿಂಗಳಲ್ಲಿ ಇತ್ಯರ್ಥ: ಸಚಿವ ಕೆ.ಹೆಚ್. ಮುನಿಯಪ್ಪ

ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಗೊಂದಲ ಒಂದು ತಿಂಗಳಲ್ಲಿ ಇತ್ಯರ್ಥ: ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು : ​ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆಯ ಕುರಿತಾದ ಗೊಂದಲಗಳು ಇನ್ನು ಒಂದು ತಿಂಗಳ ಒಳಗಾಗಿ ಬಗೆಹರಿಯಲಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಪ್ರಸ್ತುತ ನಾಯಕರು ಮುಂದುವರಿಯುತ್ತಾರಾ ಅಥವಾ ಬದಲಾವಣೆಯಾಗುತ್ತಾರಾ ಎಂಬ ಬಗ್ಗೆ ಹೈಕಮಾಂಡ್ ಶೀಘ್ರದಲ್ಲೇ ಸ್ಪಷ್ಟನೆ ನೀಡಲಿದೆ ಎಂದು ಹೇಳಿದರು. ​ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತಾಗಿ ಮುಖ್ಯಮಂತ್ರಿಗಳು ನಡೆಸಿದ ಸಭೆಯ ಬಗ್ಗೆ ಮಾತನಾಡಿದ ಸಚಿವರು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ವಿಚಾರದಲ್ಲಿ ದೇಶಾದ್ಯಂತ ಗೊಂದಲ ಮತ್ತು ಸಂಶಯಗಳು ವ್ಯಕ್ತವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪಟ್ಟಿ ಪರಿಷ್ಕರಣೆಯು ನ್ಯಾಯಸಮ್ಮತವಾಗಿ ನಡೆಯಬೇಕು; ರಾಜಕೀಯ ಲಾಭಕ್ಕಾಗಿ ತಮಗೆ ಬೇಕಾದವರನ್ನು ಉಳಿಸಿಕೊಂಡು ಬೇಡದವರನ್ನು ತೆಗೆಯುವ ಕೆಲಸವಾಗಬಾರದು. ಮತದಾರರ ಹಿತ ರಕ್ಷಿಸುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಎಲ್‌ಎ-2 (BLA-2) ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದ್ದು, ಅವರಿಂದ ನಿಖರ ಮಾಹಿತಿ ಪಡೆಯಲಾಗುವುದು ಎಂದರು. ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಅವರು ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿದ ಅವರು, ಹಣ ಹಾಗೂ ತೋಳ್ಬಲ ಬಳಸಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಸಾಧ್ಯವಿಲ್ಲ, ಅಂತಿಮವಾಗಿ ಜನರೇ ತೀರ್ಪು ನೀಡಲಿದ್ದಾರೆ ಎಂದು ತಿಳಿಸಿದರು. ಕೇರಳದ ಮತದಾರರ ಜಾಗೃತಿಯನ್ನು ಶ್ಲಾಘಿಸಿದ ಮುನಿಯಪ್ಪ, ಅಲ್ಲಿ ಇಂತಹ ಅಕ್ರಮಗಳು ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

Category
ಕರಾವಳಿ ತರಂಗಿಣಿ