image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನಲ್ಲಿ ಮುಂಬರುವ 'SIR' ಕುರಿತು ಮಹತ್ವದ ಸಭೆ: ರಾಜ್ಯ ಸರ್ಕಾರದ ಎಚ್ಚರದ ಹೆಜ್ಜೆ

ಬೆಂಗಳೂರಿನಲ್ಲಿ ಮುಂಬರುವ 'SIR' ಕುರಿತು ಮಹತ್ವದ ಸಭೆ: ರಾಜ್ಯ ಸರ್ಕಾರದ ಎಚ್ಚರದ ಹೆಜ್ಜೆ

ಬೆಂಗಳೂರು : ​ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆಯಿಂದ ಉಂಟಾದ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು, ಕರ್ನಾಟಕದಲ್ಲಿ ಮುಂಬರುವ ಈ ಪ್ರಕ್ರಿಯೆಯ ಕುರಿತು ಗಂಭೀರ ಸಮಾಲೋಚನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಚಿವರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಿ, ಎಸ್‌ಐಆರ್‌ನಿಂದ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ. ವಿಶೇಷವಾಗಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳು ಡಿಲೀಟ್ ಆಗದಂತೆ ತಡೆಯಲು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಲು ಸರ್ಕಾರ ಹಾಗೂ ಪಕ್ಷವು ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬ ಬಗ್ಗೆ ನಾನಾ ಆಯಾಮಗಳಲ್ಲಿ ಸಮಾಲೋಚನೆ ನಡೆಸಲಾಯಿತು.

​ಈ ನಿರ್ಣಾಯಕ ಸಭೆಯಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ್, ಸಚಿವರಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದು, ಚುನಾವಣಾ ಆಯೋಗದ ಮುಂದಿನ ನಡೆ ಹಾಗೂ ಅದು ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಪ್ರಗತಿಪರ ಸಂಘಟನೆಗಳು ಪಶ್ಚಿಮ ಬಂಗಾಳದ ಉದಾಹರಣೆಯನ್ನು ನೀಡಿ, ಅಲ್ಲಿ ಲಕ್ಷಾಂತರ ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದನ್ನು ನೆನಪಿಸಿ ಆತಂಕ ವ್ಯಕ್ತಪಡಿಸಿವೆ. ಈ ಎಸ್‌ಐಆರ್ ಪ್ರಕ್ರಿಯೆಯು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ ಕೂಡಲೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಂಘಟನೆಗಳ ಮುಖಂಡರು ಸಲಹೆ ನೀಡಿದ್ದಾರೆ.

​ಸಭೆಯ ನಂತರ ಮಾತನಾಡಿದ ಆಪ್ ಮುಖಂಡ ಸೀತಾರಾಂ ಗುಂಡಪ್ಪ ಅವರು, ಈಗಾಗಲೇ 17 ರಾಜ್ಯಗಳಲ್ಲಿ ಈ ಪ್ರಕ್ರಿಯೆಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಕೋಟ್ಯಂತರ ಮತದಾರರು ವಂಚಿತರಾಗಿದ್ದಾರೆ ಎಂದು ದೂರಿದರು. ಬಿಜೆಪಿ ತರುವ ಇಂತಹ ಬದಲಾವಣೆಗಳಿಂದ ಪ್ರಜಾಪ್ರಭುತ್ವದ ಹತ್ಯೆಯಾಗುತ್ತಿದೆ ಎಂದು ಆರೋಪಿಸಿದ ಅವರು, ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ಪ್ರತಿ ಗ್ರಾಮ ಮಟ್ಟದಲ್ಲಿ ಬಿಎಲ್‌ಒಗಳ ಮೂಲಕ ಪಾರದರ್ಶಕವಾಗಿ ಕೆಲಸ ನಡೆಯಬೇಕು ಎಂದು ಆಗ್ರಹಿಸಿದರು. ದಾಖಲೆಗಳಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನೇ ನೆಪ ಮಾಡಿಕೊಂಡು ತರಾತುರಿಯಲ್ಲಿ ಎಸ್‌ಐಆರ್ ಜಾರಿಗೊಳಿಸುವುದು ಸರಿಯಲ್ಲ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆ ಎಲ್ಲ ಶಾಸಕರು ಮತ್ತು ಸಚಿವರನ್ನು ಒಳಗೊಂಡು ಸಮಗ್ರವಾಗಿ ಚರ್ಚಿಸಿ ಮುಂದುವರಿಯುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ