ಬೆಂಗಳೂರು : ರಸ್ತೆ ಅಪಘಾತವೊಂದರಲ್ಲಿ ತನ್ನದೇ ಸಿಬ್ಬಂದಿಯ ತಪ್ಪನ್ನು ಮರೆಮಾಚಿ, ನ್ಯಾಯಾಲಯಕ್ಕೆ ದ್ವಂದ್ವ ಮಾಹಿತಿ ನೀಡುವ ಮೂಲಕ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) ಹೈಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಪರಿಹಾರ ನ್ಯಾಯಾಧೀಕರಣ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಿಗಮ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ವಿಚಾರಣೆ ವೇಳೆ ನಿಗಮದ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ಅಪಘಾತಕ್ಕೆ ಕಾರಣನಾದ ಗುತ್ತಿಗೆ ಆಧಾರಿತ ಚಾಲಕನನ್ನು ಈಗಾಗಲೇ ಕೆಲಸದಿಂದ ವಜಾಗೊಳಿಸಿ ಮತ್ತು ನಿರ್ವಾಹಕನ ವೇತನ ಬಡ್ತಿಯನ್ನು ಕಡಿತಗೊಳಿಸಿ ನಿಗಮವು ಶಿಸ್ತು ಕ್ರಮ ಜರುಗಿಸಿದೆ. ಅಂದರೆ, ಆಂತರಿಕವಾಗಿ ತನ್ನ ಸಿಬ್ಬಂದಿಯ ತಪ್ಪನ್ನು ಒಪ್ಪಿಕೊಂಡಿರುವ ನಿಗಮವು, ನ್ಯಾಯಾಲಯದಲ್ಲಿ ಮಾತ್ರ ಮೃತ ವ್ಯಕ್ತಿಯದ್ದೇ ತಪ್ಪು ಎಂದು ವಾದಿಸುತ್ತಿರುವುದು ಕಾನೂನುಬಾಹಿರ ಮತ್ತು ನ್ಯಾಯಾಂಗದ ಪಾವಿತ್ರ್ಯತೆಗೆ ಧಕ್ಕೆ ತರುವಂತಹದ್ದು ಎಂದು ಆಕ್ಷೇಪಿಸಿದೆ.
ನ್ಯಾಯಾಲಯಕ್ಕೆ ಬರುವ ದಾವೆದಾರರು ಸತ್ಯದ ಹಾದಿಯಲ್ಲಿ ಬರಬೇಕು, ಆದರೆ ಇಲ್ಲಿ ನಿಗಮವು ದ್ವಂದ್ವ ನಿಲುವು ತಳೆದಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ವಿಧಿಸಲಾದ 25 ಸಾವಿರ ರೂ. ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಮತ್ತು ಈ ಮೊತ್ತವನ್ನು ಪ್ರಕರಣದಲ್ಲಿ ದ್ವಂದ್ವ ನಿಲುವು ತಳೆಯಲು ಕಾರಣರಾದ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಆಂತರಿಕ ಶಿಸ್ತು ಕ್ರಮದ ಮಾಹಿತಿಯನ್ನು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ಇಂತಹ ಪ್ರಕರಣಗಳ ಪರಿಶೀಲನೆಗಾಗಿ ಪ್ರತ್ಯೇಕ ಸಮಿತಿ ರಚಿಸಿ ಸೂಕ್ತ ಸುತ್ತೋಲೆ ಹೊರಡಿಸುವಂತೆ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.