image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಂಜಿನಿಯರಿಂಗ್ ಶಿಕ್ಷಣದಲ್ಲಿ ಕಂಪ್ಯೂಟರ್ ಕೋರ್ಸ್‌ಗಳ ಅಬ್ಬರಕ್ಕೆ ಬ್ರೇಕ್: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಹತ್ವದ ಘೋಷಣೆ

ಎಂಜಿನಿಯರಿಂಗ್ ಶಿಕ್ಷಣದಲ್ಲಿ ಕಂಪ್ಯೂಟರ್ ಕೋರ್ಸ್‌ಗಳ ಅಬ್ಬರಕ್ಕೆ ಬ್ರೇಕ್: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಹತ್ವದ ಘೋಷಣೆ

ಶಿವಮೊಗ್ಗ: ದೂರದೃಷ್ಟಿಯ ಕೊರತೆ ಹಾಗೂ ಕೇವಲ ಕಂಪ್ಯೂಟರ್ ಸಂಬಂಧಿ ಕೋರ್ಸ್‌ಗಳ ಮೇಲಿನ ವ್ಯಾಮೋಹದಿಂದಾಗಿ ಎಂಜಿನಿಯರಿಂಗ್ ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಅಸಮತೋಲನವನ್ನು ಸರಿಪಡಿಸಲು ರಾಜ್ಯ ಸರ್ಕಾರ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಬುಧವಾರ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, ಇನ್ನು ಮುಂದೆ ಕಂಪ್ಯೂಟರ್ ಎಂಜಿನಿಯರಿಂಗ್ ಸೀಟುಗಳ ಸಂಖ್ಯೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

​ಪ್ರಸ್ತುತ ಎಂಜಿನಿಯರಿಂಗ್ ಪದವಿ ಪಡೆಯುತ್ತಿರುವವರಲ್ಲಿ ಕೇವಲ ಶೇ. 17 ರಷ್ಟು ಮಂದಿಗೆ ಮಾತ್ರ ಉದ್ಯೋಗ ಲಭಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಲಭ್ಯವಿರುವ ಒಟ್ಟು 1.53 ಲಕ್ಷ ಎಂಜಿನಿಯರಿಂಗ್ ಸೀಟುಗಳ ಪೈಕಿ 1 ಲಕ್ಷಕ್ಕೂ ಅಧಿಕ ಸೀಟುಗಳು ಕೇವಲ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ್ದೇ ಆಗಿವೆ. ಅತ್ತ ಸಿವಿಲ್ ಮತ್ತು ಮೆಕ್ಯಾನಿಕಲ್‌ನಂತಹ ಸಾಂಪ್ರದಾಯಿಕ ಕೋರ್ಸ್‌ಗಳಲ್ಲಿ ಸುಮಾರು 15 ಸಾವಿರ ಸೀಟುಗಳು ಖಾಲಿ ಉಳಿಯುತ್ತಿವೆ. ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಹಣದ ವ್ಯಾಮೋಹದಿಂದಾಗಿ ಕಂಪ್ಯೂಟರ್ ಕೋರ್ಸ್‌ಗಳ ಹಿಂದೆ ಬೀಳುತ್ತಿರುವುದು ಈ ಪರಿಸ್ಥಿತಿಗೆ ಕಾರಣವಾಗಿದ್ದು, ಇದನ್ನು ತಡೆಯಲು ಪ್ರತಿ ಕಾಲೇಜಿನಲ್ಲಿ ಕಂಪ್ಯೂಟರ್ ಕೋರ್ಸ್‌ಗಳಿಗೆ ಕೇವಲ 60 ಸೀಟುಗಳಿಗೆ ಮಾತ್ರ ಮಾನ್ಯತೆ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಕಂಪ್ಯೂಟರ್ ಸಂಬಂಧಿತ 5 ವಿವಿಧ ಕೋರ್ಸ್‌ಗಳಲ್ಲಿ ಒಟ್ಟಾರೆ ಗರಿಷ್ಠ 900 ಸೀಟುಗಳನ್ನು ಮಾತ್ರ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

​ಕಂಪ್ಯೂಟರ್ ಕೋರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಿವಿಲ್ ಮತ್ತು ಮೆಕ್ಯಾನಿಕಲ್‌ನಂತಹ ಕೋರ್ಸ್‌ಗಳನ್ನು ನಿರ್ಲಕ್ಷಿಸುತ್ತಿರುವುದು ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಎಂಜಿನಿಯರಿಂಗ್ ವಿಭಾಗಗಳನ್ನು ಬಲಪಡಿಸಲು ಪಠ್ಯಕ್ರಮದಲ್ಲಿ ಬದಲಾವಣೆ ತರುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ