ಮೈಸೂರು : ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಬ್ರಾಹ್ಮಣ ಸಮಾಜದಿಂದ ದಲಿತರೊಂದಿಗೆ ಹಮ್ಮಿಕೊಂಡಿದ್ದ ಸಹಪಂಕ್ತಿ ಭೋಜನವು ಸಾಮಾಜಿಕ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಇಲ್ಲಿಯವರೆಗೆ ದೇವಾಲಯದ ಹೊರಗಿನ ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಲಿತರನ್ನು ಬ್ರಾಹ್ಮಣರ ಬೀದಿಯ ಗುರುರಾಜ್ ಕುಟುಂಬ ಹಾಗೂ ಇತರ ಪ್ರಮುಖರು ಅಕ್ಕರೆಯಿಂದ ಬರಮಾಡಿಕೊಂಡರು. ದಲಿತರನ್ನು ದೇವಾಲಯದ ಗರ್ಭಗುಡಿಯ ಬಳಿ ಕರೆದೊಯ್ದು ಮಂಗಳಾರತಿ ಮಾಡಿಸಿದ ನಂತರ, ಅವರನ್ನು ಸಹಪಂಕ್ತಿ ಭೋಜನಕ್ಕೆ ಆಹ್ವಾನಿಸಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಮತ್ತು ದಲಿತ ಸಂಘರ್ಷ ಸಮಿತಿ ಸಂಯುಕ್ತವಾಗಿ ಆಯೋಜಿಸಿದ್ದ ಈ ಅಪರೂಪದ ಕಾರ್ಯಕ್ರಮಕ್ಕೆ ತಾಲ್ಲೂಕು ಆಡಳಿತವು ಸಾಕ್ಷಿಯಾಯಿತು. ವಿಶೇಷವೆಂದರೆ, ಬ್ರಾಹ್ಮಣ ಸಮಾಜದವರೇ ಊಟದ ಖಾದ್ಯಗಳನ್ನು ಸಿದ್ಧಪಡಿಸಿದ್ದರೆ, ದಲಿತ ಮುಖಂಡರು ಊಟ ಬಡಿಸುವ ಮೂಲಕ ಸಮಾನತೆಯ ಸಂದೇಶ ಸಾರಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್ ಅವರು, "ಅಸ್ಪೃಶ್ಯತೆ ಮತ್ತು ಜಾತೀಯತೆ ಅನಿಷ್ಟ ಪದ್ಧತಿಗಳಾಗಿದ್ದು, ಇಂತಹ ಸಹಪಂಕ್ತಿ ಭೋಜನಗಳು ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯಲಿವೆ" ಎಂದು ಅಭಿಪ್ರಾಯಪಟ್ಟರು.
ಬ್ರಾಹ್ಮಣ ಸಮಾಜದ ಗುರುರಾಜ್ ಅವರು ಮಾತನಾಡಿ, "ದಲಿತರನ್ನು ಬ್ರಾಹ್ಮಣ ಮತ್ತು ಇತರ ಸಮುದಾಯಗಳು ದೂರವಿಟ್ಟಿದ್ದರಿಂದ ನಾವು ಕಳೆದುಕೊಂಡಿದ್ದೇ ಹೆಚ್ಚು. ನಮ್ಮ ಸೋದರ ಸಂಬಂಧಿಗಳಂತಿರುವ ದಲಿತರನ್ನು ಒಟ್ಟುಗೂಡಿಸಿಕೊಂಡು ಅಸ್ಪೃಶ್ಯತೆ ನಿರ್ಮೂಲನೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ" ಎಂದರು. ದಸಂಸ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, "ಇದು ಮುಜರಾಯಿ ದೇವಸ್ಥಾನವಾಗಿದ್ದರೂ ಇಲ್ಲಿಯವರೆಗೆ ನಮಗೆ ಪ್ರವೇಶ ಸೀಮಿತವಾಗಿತ್ತು. ಆದರೆ ಯಾವ ಸಮುದಾಯ ನಮ್ಮನ್ನು ದೂರವಿಟ್ಟಿತ್ತೋ, ಅದೇ ಸಮುದಾಯದ ಪ್ರಗತಿಪರರು ಇಂದು ನಮ್ಮನ್ನು ದೇಗುಲದೊಳಕ್ಕೆ ಬರಮಾಡಿಕೊಂಡು ಸಹಪಂಕ್ತಿ ಭೋಜನ ಮಾಡಿಸುತ್ತಿರುವುದು ಆಶ್ಚರ್ಯದ ಜೊತೆಗೆ ನಮ್ಮ ಆತ್ಮಗೌರವವನ್ನು ಹೆಚ್ಚಿಸಿದೆ" ಎಂದು ಸಂತಸ ವ್ಯಕ್ತಪಡಿಸಿದರು.