ಬೆಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರುಎಣಿಕೆ ಪ್ರಕ್ರಿಯೆಯು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ. ಈ ಕುರಿತು ಗೃಹ ಕಚೇರಿ 'ಕೃಷ್ಣಾ'ದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿಯು ವ್ಯವಸ್ಥಿತವಾಗಿ 'ವೋಟ್ ಚೋರಿ' ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ನಡೆದ ಮರುಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ ಲಭಿಸಿದ್ದ 569 ಅಂಚೆ ಮತಗಳ ಪೈಕಿ 255 ಮತಗಳನ್ನು ಅಸಿಂಧುಗೊಳಿಸಿರುವುದು ಕ್ರಿಮಿನಲ್ ಪಿತೂರಿಯ ಭಾಗವಾಗಿದೆ ಎಂದು ಸಿಎಂ ಕಿಡಿಕಾರಿದ್ದಾರೆ. 2023ರ ಸಾಮಾನ್ಯ ಚುನಾವಣೆಯ ಸಂದರ್ಭದಲ್ಲಿ ಇದೇ ಮತಗಳನ್ನು ಚುನಾವಣಾಧಿಕಾರಿಗಳು ಮತ್ತು ಏಜೆಂಟ್‌ಗಳು ಸಮ್ಮತಿಸಿ, ಅರ್ಹ ಮತಗಳೆಂದು ಪರಿಗಣಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಅವು ಹೇಗೆ ಅನರ್ಹವಾಗುತ್ತವೆ ಎಂದು ಪ್ರಶ್ನಿಸಿರುವ ಅವರು, ದಾಖಲೆಗಳನ್ನು ಇಟ್ಟಿದ್ದ ಟ್ರಂಕ್‌ಗಳನ್ನು ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದುರುದ್ದೇಶಪೂರಿತವಾಗಿ ತಿದ್ದಲಾಗಿದೆ ಎಂದು ದೂರಿದ್ದಾರೆ. ವಿಶೇಷವಾಗಿ ರಾಜೇಗೌಡರ ಮೂರನೇ ಸುತ್ತಿನ ಎಲ್ಲಾ 170 ಮತಗಳು ಅನರ್ಹಗೊಂಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಮರುಎಣಿಕೆ ಪ್ರಕ್ರಿಯೆಯಲ್ಲಿ ಕೇಂದ್ರದ ಚುನಾವಣಾ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ವೀಕ್ಷಕರ ಅನುಮತಿ ಇಲ್ಲದೆಯೇ ಚುನಾವಣಾಧಿಕಾರಿಗಳು ತರಾತುರಿಯಲ್ಲಿ ಫಲಿತಾಂಶ ಘೋಷಿಸಿರುವುದು ಕಾನೂನುಬಾಹಿರ. ಈ ಮತಪತ್ರಗಳನ್ನು ಕೂಡಲೇ ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿ ಇಂಕ್ ತಪಾಸಣೆ ನಡೆಸಬೇಕಿತ್ತು ಎಂದು ಅವರು ಒತ್ತಾಯಿಸಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿರುವ ಬಿಜೆಪಿಯು ಹಿಂದೆ 'ಚಿಲುಮೆ' ಸಂಸ್ಥೆಯ ಮೂಲಕ ಮತದಾರರ ಪಟ್ಟಿ ತಿದ್ದಲು ಯತ್ನಿಸಿತ್ತು, ಈಗ ನೇರವಾಗಿ ಮತಪತ್ರಗಳನ್ನೇ ಕಳ್ಳತನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ರಾಜೇಗೌಡರ ದೂರಿನ ಮೇರೆಗೆ ದಾಖಲಾಗಿರುವ ಎಫ್‌ಐಆರ್ ಅನ್ವಯ ನಿಷ್ಪಕ್ಷಪಾತ ತನಿಖೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.