ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ಸ್ಮರಣಾರ್ಥ ಆಯೋಜಿಸಲಾಗಿರುವ ‘ಬಿಎಸ್‍ವೈ ಅಭಿಮಾನೋತ್ಸವ’ ಕಾರ್ಯಕ್ರಮದ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮೇ 9ರಂದು ಬೆಳಿಗ್ಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ, ಚಿತ್ರದುರ್ಗದ ಈ ಬೃಹತ್ ಸಮಾವೇಶವು ಬೆಳಿಗ್ಗೆಯ ಬದಲಾಗಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬುಧವಾರ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂದು ಮಧ್ಯಾಹ್ನ 3:45ಕ್ಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಯಡಿಯೂರಪ್ಪನವರ ಸುದೀರ್ಘ ಸಾರ್ವಜನಿಕ ಸೇವೆಯನ್ನು ಗೌರವಿಸುವ ಈ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಲು ಸುಮಾರು 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಸಮಾವೇಶಕ್ಕಾಗಿ ಈಗಾಗಲೇ 10 ಸಾವಿರ ಬಸ್‌ಗಳು ಹಾಗೂ ಸುಮಾರು 50 ಸಾವಿರಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಕಾಯ್ದಿರಿಸಲಾಗಿದ್ದು, ಭರದ ಸಿದ್ಧತೆಗಳು ಸಾಗಿವೆ ಎಂದರು. ನಾಡಿನಾದ್ಯಂತ ಇರುವ ಮಠಾಧೀಶರು, ಹರಗುರು ಚರಮೂರ್ತಿಗಳು ಮತ್ತು ಎಲ್ಲ ಸಮಾಜದ ಮುಖಂಡರು ಈ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವದಿಸಬೇಕೆಂದು ವಿಜಯೇಂದ್ರ ಅವರು ಇದೇ ಸಂದರ್ಭದಲ್ಲಿ ವಿನಂತಿಸಿಕೊಂಡರು.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಮಾತನಾಡಿ, ಯಡಿಯೂರಪ್ಪನವರ ಜೀವನ ಮತ್ತು ಸಾಧನೆಯನ್ನು ಬಿಂಬಿಸುವ ಎರಡು ಪ್ರಮುಖ ಗ್ರಂಥಗಳನ್ನು ಈ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. 'ಕೆಂದಾವರೆ-ಕಮಲದಲ್ಲಿ ಅರಳಿದ ಹೂ' ಮತ್ತು 'ಸದನದಲ್ಲಿ ಶಿಕಾರಿ' ಎಂಬ ಈ ಪುಸ್ತಕಗಳು ಅವರ ಹೋರಾಟದ ಹಾದಿಯನ್ನು ಪರಿಚಯಿಸಲಿವೆ. ಮೇ 8ರಂದು ಸಂಜೆ ಯಡಿಯೂರಪ್ಪನವರು ಚಿತ್ರದುರ್ಗಕ್ಕೆ ಆಗಮಿಸಲಿದ್ದು, 24ಕ್ಕೂ ಹೆಚ್ಚು ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಅವರನ್ನು ಭವ್ಯವಾಗಿ ಬರಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.