ಬೆಂಗಳೂರು : ಭಾರತದ ಜೈವಿಕ ತಂತ್ರಜ್ಞಾನ ರಂಗದ ದೈತ್ಯ ಸಂಸ್ಥೆಯಾದ 'ಬಯೋಕಾನ್' ಈಗ ಮಹತ್ವದ ನಾಯಕತ್ವ ಬದಲಾವಣೆಗೆ ಸಜ್ಜಾಗಿದೆ. ಸಂಸ್ಥೆಯ ಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ತಮ್ಮ ಉತ್ತರಾಧಿಕಾರಿಯಾಗಿ ಸೋದರನ ಮಗಳು ಕ್ಲೇರ್ ಮಜುಂದಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಬಯೋಕಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕಿರಣ್ ಮಜುಂದಾರ್ ಅವರು, ಮಕ್ಕಳಿಲ್ಲದ ಕಾರಣ ಕಂಪನಿಯ ಭವಿಷ್ಯದ ದೃಷ್ಟಿಯಿಂದ ಸಮರ್ಥ ನಾಯಕತ್ವಕ್ಕಾಗಿ ಕ್ಲೇರ್ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಲೇರ್ ಮಜುಂದಾರ್ ಅವರು ಕೇವಲ ಕೌಟುಂಬಿಕ ಹಿನ್ನೆಲೆಯಿಂದ ಈ ಸ್ಥಾನಕ್ಕೆ ಬರುತ್ತಿಲ್ಲ; ಅವರ ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆಗಳು ಅಪ್ರತಿಮವಾಗಿವೆ. 37 ವರ್ಷದ ಕ್ಲೇರ್ ಪ್ರಸ್ತುತ ಅಮೆರಿಕದ 'ಬಿಕಾರಾ ಥೆರಪಿಟಿಕ್ಸ್' ಎಂಬ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಸಿಇಒ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯು ಬಯೋಕಾನ್‌ನಿಂದಲೇ ಪ್ರೇರಿತವಾಗಿ ಆರಂಭವಾಗಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಕ್ಲೇರ್ ಮಜುಂದಾರ್ ಅವರ ಶೈಕ್ಷಣಿಕ ಹಿನ್ನೆಲೆ ಅಚ್ಚರಿ ಮೂಡಿಸುವಂತಿದೆ. ಅವರು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯಿಂದ ಬಯೋಲಾಜಿಕಲ್ ಎಂಜಿನಿಯರಿಂಗ್ ಪದವಿ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕ್ಯಾನ್ಸರ್ ಬಯೋಲಜಿಯಲ್ಲಿ ಪಿಎಚ್‌ಡಿ ಮತ್ತು ಎಂಬಿಎ ಪದವಿಗಳನ್ನು ಪಡೆದಿದ್ದಾರೆ. ಇವರ ಇಡೀ ಕುಟುಂಬವೇ ತಾಂತ್ರಿಕವಾಗಿ ಅತ್ಯಂತ ಪ್ರಬಲವಾಗಿದ್ದು, ಇವರ ಸಹೋದರ ಎರಿಕ್ ಮಜುಂದಾರ್ ಅವರು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಐ (AI) ತಜ್ಞರಾಗಿದ್ದಾರೆ. ಪತಿ ಥಾಮಸ್ ರಾಬರ್ಟ್ಸ್ ಅವರು ಅಮೆರಿಕದ ಖ್ಯಾತ ಕ್ಯಾನ್ಸರ್ ತಜ್ಞರಾಗಿದ್ದಾರೆ.
ಬಯೋಕಾನ್ ಸಂಸ್ಥೆಯು ಪ್ರಸ್ತುತ ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ಜೈವಿಕ ಔಷಧಗಳ ಸಂಶೋಧನೆಯತ್ತ ದಾಪುಗಾಲು ಹಾಕುತ್ತಿದೆ. ಈ ಹೊತ್ತಿನಲ್ಲಿ ಕ್ಲೇರ್ ಅವರ ತಾಂತ್ರಿಕ ಪರಿಣತಿ ಮತ್ತು ನಾಯಕತ್ವವು ಕಂಪನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬ ನಿರೀಕ್ಷೆಯಿದೆ. ಆದರೆ, ಈ ಅಧಿಕಾರ ಹಸ್ತಾಂತರವು ತಕ್ಷಣವೇ ನಡೆಯುವುದಿಲ್ಲ. ಕ್ಲೇರ್ ಅವರು ಕಂಪನಿಯ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುವವರೆಗೂ ಕಿರಣ್ ಮಜುಂದಾರ್ ಶಾ ಅವರೇ ಮಾರ್ಗದರ್ಶಕಿಯಾಗಿ ಮುಂದುವರಿಯಲಿದ್ದಾರೆ. ಕ್ಲೇರ್ ಸಿದ್ಧರಾದ ಬಳಿಕವಷ್ಟೇ ಅಧಿಕೃತವಾಗಿ ಬಯೋಕಾನ್ ಛೇರ್ಮನ್ ಸ್ಥಾನವನ್ನು ಅಲಂಕರಿಸಲಿದ್ದಾರೆ. ಈ ಘೋಷಣೆಯು ಭಾರತೀಯ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದ್ದು, ಕ್ಲೇರ್ ಅವರು ಕಿರಣ್ ಮಜುಂದಾರ್ ಅವರ ಪರಂಪರೆಯನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.