ಚಿಕ್ಕಮಗಳೂರು : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸಾಧಿಸಿರುವ ಐತಿಹಾಸಿಕ ಗೆಲುವು ಕೇವಲ ಒಂದು ಪಕ್ಷದ ಗೆಲುವಲ್ಲ, ಇದು ಇಡೀ ಭಾರತದ ಗೆಲುವು ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಬಣ್ಣಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಯಕ್ಕಾಗಿ ಶ್ರಮಿಸಿದ ಬಂಗಾಳದ ಜನತೆ, ಕಾರ್ಯಕರ್ತರು ಹಾಗೂ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.
ಬಂಗಾಳದಲ್ಲಿ ದಶಕಗಳಿಂದ ಮನೆಮಾಡಿದ್ದ ಮತೀಯ ಓಲೈಕೆ, ಭ್ರಷ್ಟಾಚಾರ, ರಾಜಕೀಯ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಈ ಫಲಿತಾಂಶ ಅಂತ್ಯ ಹಾಡಿದೆ. ಎಡಪಕ್ಷಗಳ ಆಡಳಿತದಿಂದ ಬೇಸತ್ತು ಟಿಎಂಸಿಯನ್ನು ಆರಿಸಿದ್ದ ಜನರಿಗೆ ಅಲ್ಲಿ 'ಬಾಣಲೆಯಿಂದ ಬೆಂಕಿಗೆ ಬಿದ್ದ' ಅನುಭವವಾಗಿತ್ತು. ಹೀಗಾಗಿ ಭಾರತದ ಸುರಕ್ಷತೆ ಮತ್ತು ಬಂಗಾಳದ ಉಜ್ವಲ ಭವಿಷ್ಯಕ್ಕಾಗಿ ಜನರು ಬಿಜೆಪಿಯನ್ನು ಅನಿವಾರ್ಯವಾಗಿ ಆಯ್ಕೆ ಮಾಡಿದ್ದಾರೆ ಎಂದು ಅವರು ವಿವರಿಸಿದರು. ಈ ಗೆಲುವಿನಿಂದಾಗಿ ವಿರೋಧ ಪಕ್ಷಗಳ 'ಇಂಡಿ ಅಲಯನ್ಸ್' ಸಂಪೂರ್ಣವಾಗಿ ಪಂಚರ್ ಆಗಿದೆ ಎಂದು ಅವರು ವ್ಯಂಗ್ಯವಾಡಿದರು.
ಬಂಗಾಳವು ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿಯವರ ಜನ್ಮಭೂಮಿ ಮತ್ತು ಕರ್ಮಭೂಮಿಯಾಗಿದ್ದು, ಅಲ್ಲಿ ಬಿಜೆಪಿಯ ವಿಜಯವು ಅವರ ಆತ್ಮಕ್ಕೆ ಶಾಂತಿ ತಂದಿರಬಹುದು ಎಂದು ರವಿ ಅಭಿಪ್ರಾಯಪಟ್ಟರು. ಟಿಎಂಸಿ ಮತ್ತು ಎಡಪಕ್ಷಗಳ ಅವಧಿಯಲ್ಲಿ ನುಸುಳುಕೋರರು ಸುರಕ್ಷಿತವಾಗಿದ್ದರು, ಆದರೆ ಈಗ ಬಿಜೆಪಿ ಆಡಳಿತದಲ್ಲಿ ಬಂಗಾಳದ ಸಂಸ್ಕೃತಿ ಮತ್ತು ಜನತೆ ಸುರಕ್ಷಿತವಾಗಿರಲಿದ್ದಾರೆ. ಹಿಂದೂಗಳನ್ನು ದಮನಿಸಿ ಮುಸ್ಲಿಮರನ್ನು ಓಲೈಸುವ ರಾಷ್ಟ್ರಘಾತಕ ರಾಜಕಾರಣಕ್ಕೆ ಬಂಗಾಳದ ಜನತೆ ತೆರೆ ಎಳೆದಿದ್ದಾರೆ.
ಈ ಚುನಾವಣಾ ಪ್ರಕ್ರಿಯೆಯಲ್ಲಿ ಕರ್ನಾಟಕದ ಅರುಣ್ ಬಿನ್ನಾಡಿ ಸೇರಿದಂತೆ 37 ಪ್ರಮುಖ ನಾಯಕರು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದು, ಮತದಾರರಲ್ಲಿ ಭಯಮುಕ್ತವಾಗಿ ಮತ ಚಲಾಯಿಸುವ ಧೈರ್ಯ ತುಂಬಲಾಗಿತ್ತು. ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜನರು ಬದಲಾವಣೆಗಾಗಿ ಮತ ಚಲಾಯಿಸಲು ಸಾಧ್ಯವಾಯಿತು. ಶೇಕಡಾ 90ಕ್ಕೂ ಅಧಿಕ ಮತದಾನವಾದಾಗಲೇ ಬಿಜೆಪಿಯ ಗೆಲುವು ಖಚಿತವಾಗಿತ್ತು ಎಂದು ತಿಳಿಸಿದ ಡಾ. ರವಿ ಸಿ.ಟಿ., ತಾವು ಕಳೆದ ನಾಲ್ಕೂವರೆ ತಿಂಗಳಿನಿಂದ ದಕ್ಷಿಣ ಪರಗಣ ಪ್ರದೇಶದಲ್ಲಿ ಕೆಲಸ ಮಾಡಿದ್ದು ಈ ಫಲಿತಾಂಶವು ಅತ್ಯಂತ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.