ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಐದು ದಶಕಗಳ ಸುದೀರ್ಘ ಪಯಣ ಪೂರೈಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸನ್ಮಾನಾರ್ಥವಾಗಿ ಮೇ 9ರಂದು ನಗರದ ಹೊರವಲಯದ ಹಳೇ ರಾಷ್ಟ್ರೀಯ ಹೆದ್ದಾರಿ ಬದಿಯ ವಿಶಾಲ ಮೈದಾನದಲ್ಲಿ ‘ಬಿಎಸ್‌ವೈ ಅಭಿಮಾನೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದಕ್ಕಾಗಿ ಯುದ್ಧೋಪಾದಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕಳೆದ ಒಂದು ವಾರದಿಂದ ಹಗಲಿರುಳು ವೇದಿಕೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳಲಿರುವ ಮುಖ್ಯ ವೇದಿಕೆಯ ಜೊತೆಗೆ ಗಣ್ಯರಿಗಾಗಿ ಪ್ರತ್ಯೇಕ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ವಿಶೇಷವೆಂದರೆ, ವಿವಿಧ ಮಠಾಧೀಶರಿಗಾಗಿಯೇ ಬಲಭಾಗದಲ್ಲಿ ಪ್ರತ್ಯೇಕ ವೇದಿಕೆ ಸಿದ್ಧಗೊಳ್ಳುತ್ತಿದ್ದು, ರಾಜ್ಯ ಹಾಗೂ ಹೊರರಾಜ್ಯಗಳ ಸುಮಾರು 1,000 ಸ್ವಾಮೀಜಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಶಾಸಕರು ಮತ್ತು ಸಂಸದರಿಗೆ ಎಡಭಾಗದ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಶ್ರೀಗಳನ್ನು ಆಹ್ವಾನಿಸುವ ಹೊಣೆಯನ್ನು ಪ್ರಮುಖ ಮುಖಂಡರಿಗೆ ವಹಿಸಲಾಗಿದೆ.
ಈ ಬೃಹತ್ ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸುಮಾರು 10 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು, ಬಂದವರಿಗೆಲ್ಲರಿಗೂ ಮೈಸೂರು ಪಾಕ್, ಚಪಾತಿ, ರೈಸ್‌ಬಾತ್ ಹಾಗೂ ಬಿಸಿಬೇಳೆ ಬಾತ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಮೊಸರನ್ನ ಮತ್ತು 32 ಕಡೆಗಳಲ್ಲಿ ಮಜ್ಜಿಗೆ ಹಾಗೂ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗುತ್ತಿದೆ. ಮೈದಾನದಲ್ಲಿ ಉಷ್ಣಾಂಶವನ್ನು ನಿಯಂತ್ರಿಸಲು ಹೈದರಾಬಾದ್‌ನಿಂದ ವಿಶೇಷ ‘ಮಿಸ್ಟ್ ಫ್ಯಾನ್’ಗಳನ್ನು ತರಿಸಲಾಗುತ್ತಿದ್ದು, ಊಟದ ನಿರ್ವಹಣೆಗಾಗಿ ಐದು ವಿಭಾಗಗಳಲ್ಲಿ ಶಾಸಕರ ನೇತೃತ್ವದ ತಂಡಗಳನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗೆ 2,000 ಬಿಜೆಪಿ ಕಾರ್ಯಕರ್ತರು, ಸ್ವಚ್ಛತೆಗಾಗಿ 500 ಮಂದಿ ಹಾಗೂ ತುರ್ತು ಆರೋಗ್ಯ ಸೇವೆಗಾಗಿ 100 ವೈದ್ಯರ ತಂಡ ಸದಾ ಸನ್ನದ್ಧವಾಗಿರುತ್ತದೆ.
ಅಭಿಮಾನೋತ್ಸವದ ಭಾಗವಾಗಿ ಚಿತ್ರದುರ್ಗ ನಗರಕ್ಕೆ ಹಬ್ಬದ ಕಳೆ ಬಂದಿದ್ದು, ತಮಿಳುನಾಡಿನ ಕಲಾವಿದರು ಆಕರ್ಷಕ ಪ್ರವೇಶ ದ್ವಾರವನ್ನು ನಿರ್ಮಿಸುತ್ತಿದ್ದಾರೆ. ಐತಿಹಾಸಿಕ ಸ್ಮಾರಕಗಳು ಹಾಗೂ ನಗರದ ಪ್ರಮುಖ ವೃತ್ತಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಮೇ 8ರಂದು ಸಂಜೆ 5 ಗಂಟೆಗೆ ಬಿ.ಎಸ್. ಯಡಿಯೂರಪ್ಪ ಅವರು ನಗರ ಪ್ರವೇಶ ಮಾಡಲಿದ್ದು, 20 ಸಾವಿರಕ್ಕೂ ಹೆಚ್ಚು ಜನರು ಅದ್ದೂರಿ ಸ್ವಾಗತ ಕೋರಲಿದ್ದಾರೆ. ಕನಕ ವೃತ್ತದಿಂದ ಮದಕರಿ ವೃತ್ತದವರೆಗೆ ನಡೆಯಲಿರುವ ದಸರಾ ಮಾದರಿಯ ಮೆರವಣಿಗೆಯಲ್ಲಿ 100 ಕಲಾ ತಂಡಗಳು, ನೇಗಿಲು ಹೊತ್ತ 1,000 ರೈತರು ಹಾಗೂ ಪೂರ್ಣಕುಂಭ ಹೊತ್ತ 1,008 ಮಹಿಳೆಯರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಲಿದ್ದಾರೆ ಎಂದು ಸ್ವಾಗತ ಸಮಿತಿ ತಿಳಿಸಿದೆ.