image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ಹೊಸ ಅರ್ಜಿ: ವಿಚಾರಣೆ ವಿಳಂಬ ಹಾಗೂ ಅನಾರೋಗ್ಯದ ಆಧಾರದ ಮೇಲೆ ಕಾನೂನು ಹೋರಾಟ

ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ಹೊಸ ಅರ್ಜಿ: ವಿಚಾರಣೆ ವಿಳಂಬ ಹಾಗೂ ಅನಾರೋಗ್ಯದ ಆಧಾರದ ಮೇಲೆ ಕಾನೂನು ಹೋರಾಟ

ಬೆಂಗಳೂರು : ಚಂದನವನದ ಖ್ಯಾತ ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದು, ಈ ಬೆಳವಣಿಗೆಯು ಕಾನೂನು ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್, ಈ ಹಿಂದೆ ಸುಪ್ರೀಂ ಕೋರ್ಟ್ ತಮ್ಮ ಜಾಮೀನು ರದ್ದುಗೊಳಿಸಿದ ಬೆನ್ನಲ್ಲೇ ಈ ಹೊಸ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದ ಪ್ರಸ್ತುತ ತನಿಖಾ ಪ್ರಗತಿ ಹಾಗೂ ಸ್ಥಿತಿಗತಿಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

​ದರ್ಶನ್ ಪರ ವಕೀಲರು ಸಲ್ಲಿಸಿರುವ ಈ ಅರ್ಜಿಯಲ್ಲಿ ಮುಖ್ಯವಾಗಿ ವಿಚಾರಣೆಯ ವಿಳಂಬವನ್ನು ಪ್ರಸ್ತಾಪಿಸಲಾಗಿದ್ದು, ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದರೂ ಈವರೆಗೆ ಕೇವಲ 15 ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ ಎಂದು ತಿಳಿಸಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ಸಾಕ್ಷಿಗಳ ವಿಚಾರಣೆ ಮುಗಿಯಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಇದರೊಂದಿಗೆ, ದೀರ್ಘಕಾಲದ ಜೈಲುವಾಸದಿಂದ ತಮ್ಮ ವೃತ್ತಿಜೀವನಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ತಮಗೆ ಕಾಡುತ್ತಿರುವ ಬೆನ್ನು ನೋವಿನ ಸಮಸ್ಯೆ ಮತ್ತು ಜೈಲಿನಲ್ಲಿ ಎದುರಿಸುತ್ತಿರುವ ಇತರ ಆರೋಗ್ಯದ ಏರುಪೇರುಗಳನ್ನು ಜಾಮೀನು ಕೋರಲು ಪ್ರಬಲ ಕಾರಣವಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ. ಸುಪ್ರೀಂ ಕೋರ್ಟ್ ಈಗ ಸರ್ಕಾರದ ವರದಿಯನ್ನು ನಿರೀಕ್ಷಿಸುತ್ತಿದ್ದು, ರಾಜ್ಯ ಸರ್ಕಾರ ಸಲ್ಲಿಸುವ ಪ್ರತಿಕ್ರಿಯೆಯ ಮೇಲೆ ದರ್ಶನ್ ಅವರ ಭವಿಷ್ಯ ನಿರ್ಧಾರವಾಗಲಿದೆ.

Category
ಕರಾವಳಿ ತರಂಗಿಣಿ