image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಭಕ್ತರ ಉದಾರತೆಯಿಂದ ಹೆಣ್ಣುಮಕ್ಕಳ ಶಿಕ್ಷಣದ ಕನಸು ನನಸು: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಭಕ್ತರ ಉದಾರತೆಯಿಂದ ಹೆಣ್ಣುಮಕ್ಕಳ ಶಿಕ್ಷಣದ ಕನಸು ನನಸು: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಕೊಪ್ಪಳ: "ಐದು ಸಾವಿರ ಮಕ್ಕಳ ವಸತಿ ಮತ್ತು ಬಾಲಕಿಯರ ಪದವಿಪೂರ್ವ ವಸತಿ ಕಾಲೇಜಿನ ಈ ಭವ್ಯ ಕಟ್ಟಡ ನಿರ್ಮಾಣಕ್ಕೆ ಅಸಂಖ್ಯಾತ ಭಕ್ತರ ತ್ಯಾಗ ಮತ್ತು ಕೊಡುಗೆಯೇ ಕಾರಣ. ಎಲೆಮರೆಯ ಕಾಯಿಯಂತೆ ಮಠದ ಕೈಂಕರ್ಯಕ್ಕೆ ನೆರವಾದ ಪ್ರತಿ ಭಕ್ತನಿಗೂ ಈ ಸಾಧನೆಯ ಶ್ರೇಯ ಸಲ್ಲಬೇಕು. ಗವಿಮಠಕ್ಕೆ ಸಮರ್ಪಿಸಿದ ಪ್ರತಿ ದಾನವೂ ಅಂತಿಮವಾಗಿ ಭಕ್ತರಿಗೇ ಆಶೀರ್ವಾದದ ರೂಪದಲ್ಲಿ ಮರಳುತ್ತದೆ," ಎಂದು ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನುಡಿದರು.

​ತಾಲ್ಲೂಕಿನ ಕೋಳೂರು-ಕಾಟ್ರಳ್ಳಿ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿಪೂರ್ವ ವಸತಿ ಕಾಲೇಜನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು. ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ವೃತ್ತಿಜೀವನದ ಆಸೆಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಸ್ವಾಮೀಜಿ, "ಇಂದು ಎಲ್ಲರೂ ತಮ್ಮ ಮಕ್ಕಳು ಎಂಜಿನಿಯರ್‌, ಡಾಕ್ಟರ್ ಅಥವಾ ಐಎಎಸ್‌ ಅಧಿಕಾರಿಗಳಾಗಬೇಕೆಂದು ಬಯಸುತ್ತಿದ್ದಾರೆ. ಎಲ್ಲರೂ ಅದೇ ಕನಸು ಕಂಡರೆ, ಮುಂದೆ ಮಠಗಳನ್ನು ನಡೆಸಿ ಪರಂಪರೆಯನ್ನು ಮುಂದುವರಿಸುವ ಸ್ವಾಮೀಜಿಗಳಾಗುವವರು ಯಾರು?" ಎಂದು ಪ್ರಶ್ನಿಸುವ ಮೂಲಕ ನೆರೆದಿದ್ದವರಲ್ಲಿ ಆಲೋಚನೆ ಮೂಡಿಸಿದರು.

​ಮರಿಶಾಂತವೀರ ಹಾಗೂ ಶಿವಶಾಂತವೀರ ಸ್ವಾಮೀಜಿಗಳ ಪರಂಪರೆಯನ್ನು ಸ್ಮರಿಸಿದ ಅವರು, ಶಿಕ್ಷಣ, ವಸತಿ ಮತ್ತು ದಾಸೋಹದ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. "ಕೊಪ್ಪಳದ ಜನರು ಅತ್ಯಂತ ಹೃದಯವಂತರು. ಅವರು ತಮ್ಮ ಮಕ್ಕಳಿಗಿಂತ ಹೆಚ್ಚಿನ ಸ್ಥಾನವನ್ನು ನನಗೆ ನೀಡಿದ್ದಾರೆ. ಕೇವಲ ಐದು ಸಾವಿರ ಮಕ್ಕಳ ಹಾಸ್ಟೆಲ್ ಪೂರ್ಣಗೊಳಿಸುವ ಗುರಿ ನಮ್ಮದಾಗಿತ್ತು, ಆದರೆ ಭಕ್ತರ ಅತಿಶಯದ ದಾನದಿಂದಾಗಿ ಇಂದು ಸುಸಜ್ಜಿತ ಮಹಿಳಾ ವಸತಿ ಕಾಲೇಜು ತಲೆಯೆತ್ತಲು ಸಾಧ್ಯವಾಯಿತು. ಈ ಸೇವೆಯನ್ನು ಭಕ್ತರ ಸಹಕಾರವಿರುವವರೆಗೂ ನಡೆಸುತ್ತೇನೆ, ಮುಂದೆ ಸಮರ್ಥರ ಕೈಗೆ ಒಪ್ಪಿಸಿ ಹೋಗುವೆ," ಎಂದು ಭಾವನಾತ್ಮಕವಾಗಿ ನುಡಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಂಡರಗಿ ಸಂಸ್ಥಾನ ಮಠದ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ, ಮುಂಡರಗಿ ಮತ್ತು ಗವಿಮಠದ ನಡುವಿನ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು. ಈ ಗುರುಕುಲವು ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರಾದ ನಾಗಭೂಷಣ ಶಿವಾಚಾರ್ಯರು, ಕರಿಬಸವ ಸ್ವಾಮೀಜಿ, ಅಭಿನವ ಬೂದೀಶ್ವರ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದರು. ರಾಜಕೀಯ ಮುಖಂಡರಾದ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಹಾಲಪ್ಪ ಆಚಾರ್, ಶಾಸಕರುಗಳು ಹಾಗೂ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಸೇರಿದಂತೆ ಗಣ್ಯರು ಮತ್ತು ಸಾವಿರಾರು ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

Category
ಕರಾವಳಿ ತರಂಗಿಣಿ