image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಚಿವ ಸ್ಥಾನ ತ್ಯಾಗಕ್ಕೆ ನಾನು ಸಿದ್ಧ: ಸಚಿವ ಶಿವಾನಂದ ಪಾಟೀಲ್ ಅಚ್ಚರಿಯ ಹೇಳಿಕೆ

ಸಚಿವ ಸ್ಥಾನ ತ್ಯಾಗಕ್ಕೆ ನಾನು ಸಿದ್ಧ: ಸಚಿವ ಶಿವಾನಂದ ಪಾಟೀಲ್ ಅಚ್ಚರಿಯ ಹೇಳಿಕೆ

ಬೆಂಗಳೂರು : ​ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಸಚಿವ ಸಂಪುಟ ಪುನಾರಚನೆಯ ಚಟುವಟಿಕೆಗಳು ಗರಿಗೆದರಿರುವ ಬೆನ್ನಲ್ಲೇ, ಸಚಿವ ಶಿವಾನಂದ ಪಾಟೀಲ್ ಅವರು ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವ ಸಲುವಾಗಿ ತಾವು ಸಚಿವ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಸಂಪುಟ ಪುನಾರಚನೆಯಾದಾಗ ಅನೇಕರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮತ್ತು ಲಾಬಿ ನಡೆಸುತ್ತಿದ್ದರೆ, ತಾವು ಮಾತ್ರ ಅಂತಹ ಯಾವುದೇ ಕಸರತ್ತು ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

​ಹಿಂದಿನ ದಿನಗಳನ್ನು ಸ್ಮರಿಸಿದ ಶಿವಾನಂದ ಪಾಟೀಲ್ ಅವರು, ತಮಗೆ ಈ ಹಿಂದೆ ಸಚಿವ ಸ್ಥಾನ ಸಿಗದಿದ್ದಾಗಲೂ ತಾವು ತಾಳ್ಮೆಯಿಂದ ಕಾಯುತ್ತಿದ್ದೆ ಮತ್ತು ಅಂತಿಮವಾಗಿ ಹೈಕಮಾಂಡ್ ಅವರೇ ಕರೆದು ಜವಾಬ್ದಾರಿ ನೀಡಿದ್ದರು ಎಂಬುದನ್ನು ನೆನಪಿಸಿದರು. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷವು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ತಲೆಬಾಗುವುದಾಗಿ ಮತ್ತು ಯಾವುದೇ ಬದಲಾವಣೆಗಳಿಗೂ ತಾವು ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ. ಕಾಂಗ್ರೆಸ್‌ನ ಅನೇಕ ಶಾಸಕರು ಸಚಿವ ಸ್ಥಾನ ಪಡೆಯಲು ಈಗಾಗಲೇ ದೆಹಲಿಗೆ ತೆರಳಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿರುವ ಹೊತ್ತಲ್ಲೇ, ಸಚಿವರೊಬ್ಬರು ಸ್ಥಾನ ತ್ಯಾಗಕ್ಕೆ ಮುಂದಾಗಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Category
ಕರಾವಳಿ ತರಂಗಿಣಿ