image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರು ಸಜೀವ ಗ್ರೆನೇಡ್ ಪತ್ತೆ ಪ್ರಕರಣ: ಉಗ್ರ ಸಂಚು ರೂಪಿಸಿದ್ದ ‘ಛೋಟಾ ಉಸ್ಮಾನ್’ಗೆ 7 ವರ್ಷ ಜೈಲು ಶಿಕ್ಷೆ

ಬೆಂಗಳೂರು ಸಜೀವ ಗ್ರೆನೇಡ್ ಪತ್ತೆ ಪ್ರಕರಣ: ಉಗ್ರ ಸಂಚು ರೂಪಿಸಿದ್ದ ‘ಛೋಟಾ ಉಸ್ಮಾನ್’ಗೆ 7 ವರ್ಷ ಜೈಲು ಶಿಕ್ಷೆ

ಬೆಂಗಳೂರು: ರಾಜಧಾನಿಯ ಮನೆಯೊಂದರಲ್ಲಿ ಸಜೀವ ಗ್ರೆನೇಡ್ ಪತ್ತೆಯಾದ ಪ್ರಕರಣ ಹಾಗೂ ಜೈಲಿನಲ್ಲೇ ಕುಳಿತು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಗಂಭೀರ ಆರೋಪದಡಿ, ವಿಕ್ರಮ್ ಕುಮಾರ್ ಅಲಿಯಾಸ್ ಛೋಟಾ ಉಸ್ಮಾನ್ ಎಂಬಾತನಿಗೆ ಎನ್ಐಎ (NIA) ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

​ತನಿಖಾ ವರದಿಯ ಪ್ರಕಾರ, 2017ರಲ್ಲಿ ನಡೆದಿದ್ದ ನೂರ್ ಕೊಲೆ ಪ್ರಕರಣದಲ್ಲಿ ವಿಕ್ರಮ್ ಕುಮಾರ್ ಜೈಲು ಸೇರಿದ್ದಾಗ, ಲಷ್ಕರ್-ಎ-ತೊಯ್ಬಾ (LeT) ಉಗ್ರ ಟಿ. ನಾಸೀರ್ ಸಂಪರ್ಕಕ್ಕೆ ಬಂದಿದ್ದ. ನಾಸೀರ್ ಪ್ರಚೋದನೆಯಿಂದಾಗಿ ಮತಾಂತರಗೊಂಡು 'ಛೋಟಾ ಉಸ್ಮಾನ್' ಆಗಿ ಬದಲಾಗಿದ್ದ ಈತ, ಜೈಲಿನಲ್ಲೇ ಕುಳಿತು ಜುನೈದ್ ಅಹ್ಮದ್ ಸೇರಿದಂತೆ ಇತರರೊಂದಿಗೆ ಸೇರಿ ದೇಶದಾದ್ಯಂತ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಜೈಲಿನಿಂದ ಹೊರಬಂದ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಜುನೈದ್ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದ ಈತ, ಹರಿಯಾಣದ ಅಂಬಾಲದಿಂದ ಹ್ಯಾಂಡ್ ಗ್ರೆನೇಡ್ ಮತ್ತು ವಾಕಿ-ಟಾಕಿಗಳನ್ನು ಬೆಂಗಳೂರಿಗೆ ತಂದಿದ್ದ ಎಂಬ ಅಂಶ ತನಿಖೆಯಲ್ಲಿ ಸಾಬೀತಾಗಿದೆ.

​ಮುಖ್ಯವಾಗಿ, ಜೈಲಿನಿಂದ ನ್ಯಾಯಾಲಯಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಉಗ್ರ ಟಿ. ನಾಸೀರ್‌ನನ್ನು ತಪ್ಪಿಸಿಕೊಳ್ಳುವಂತೆ ಮಾಡಲು ಸ್ಫೋಟ ನಡೆಸುವ ಭಯಾನಕ ಯೋಜನೆಯನ್ನು ಈ ತಂಡ ರೂಪಿಸಿತ್ತು. ಇದಕ್ಕಾಗಿ ಆರೋಪಿಗಳು ಟೆಲಿಗ್ರಾಂ ಮತ್ತು ವಾಟ್ಸ್‌ಆ್ಯಪ್‌ಗಳಂತಹ ಎನ್‌ಕ್ರಿಪ್ಟ್ ಮಾಡಲಾದ ಮಾಧ್ಯಮಗಳ ಮೂಲಕ ಸಂವಹನ ನಡೆಸುತ್ತಿದ್ದರು. 2023ರಲ್ಲಿ ಸಿಸಿಬಿ ಪೊಲೀಸರು ಆರ್.ಟಿ. ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಈ ಸ್ಫೋಟಕ ಜಾಲ ಬೆಳಕಿಗೆ ಬಂದಿತ್ತು. ಬಳಿಕ ಪ್ರಕರಣದ ಗಂಭೀರತೆ ಅರಿತ ಎನ್ಐಎ ತನಿಖೆ ಕೈಗೆತ್ತಿಕೊಂಡು, ಇದೀಗ ಪ್ರಮುಖ ಅಪರಾಧಿಗೆ ಶಿಕ್ಷೆ ಪ್ರಕಟಿಸುವಲ್ಲಿ ಯಶಸ್ವಿಯಾಗಿದೆ.

Category
ಕರಾವಳಿ ತರಂಗಿಣಿ