image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

30 ನಾನ್ ಐಪಿಎಸ್ ಅಧಿಕಾರಿಗಳಿಗೆ ಎಸ್‌ಪಿ ವೃಂದಕ್ಕೆ ಬಡ್ತಿ ನೀಡಲು ಹೈಕೋರ್ಟ್ ಮಹತ್ವದ ಆದೇಶ

30 ನಾನ್ ಐಪಿಎಸ್ ಅಧಿಕಾರಿಗಳಿಗೆ ಎಸ್‌ಪಿ ವೃಂದಕ್ಕೆ ಬಡ್ತಿ ನೀಡಲು ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ರಾಜ್ಯ ಪೊಲೀಸ್ ಸೇವೆಯಲ್ಲಿದ್ದ 30 ನಾನ್ ಐಪಿಎಸ್ ಅಧಿಕಾರಿಗಳನ್ನು ಖಾಲಿ ಹುದ್ದೆಗಳ ಆಧಾರದ ಮೇಲೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೃಂದಕ್ಕೆ ಬಡ್ತಿ ನೀಡಲು ಪರಿಗಣಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಎಸ್‌ಪಿ ಹುದ್ದೆಗೆ ಬಡ್ತಿ ನೀಡುವ ಸಂಬಂಧ 2025ರ ಆಗಸ್ಟ್ 20ರಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ನ್ಯಾಯಪೀಠವು ಈ ಆದೇಶ ಹೊರಡಿಸಿದೆ. ಸರ್ಕಾರದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ಪೀಠವು, ಕರ್ನಾಟಕ ನಾಗರಿಕ ಸೇವಾ ನಿಯಮ (ಕೆಸಿಎಸ್‌ಆರ್) 45ರ ಅಡಿಯಲ್ಲಿ ಬಡ್ತಿಯನ್ನು ಪರಿಗಣಿಸಬೇಕು ಎಂದು ಸೂಚಿಸಿದೆ. ಇದರೊಂದಿಗೆ, ರಾಜ್ಯದಲ್ಲಿ ಲಭ್ಯವಿರುವ ಎಸ್‌ಪಿ ಹುದ್ದೆಗಳ ಸಂಖ್ಯೆ ಮತ್ತು ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, ಗೃಹ ಸಚಿವರ ಅನುಮೋದನೆ ಪಡೆದು ನಿಯಮ 42ರ ಅಡಿ ಮುಂದಿನ ಎರಡು ತಿಂಗಳೊಳಗೆ ಬಡ್ತಿ ಪ್ರಕ್ರಿಯೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

​ಈ ಪ್ರಕರಣದ ಹಿನ್ನೆಲೆಯನ್ನು ಗಮನಿಸುವುದಾದರೆ, ಲಕ್ಷ್ಮೀನಾರಾಯಣ, ಸಿದ್ದರಾಜು ಹಾಗೂ ರಾಜೇಂದ್ರ ಸೇರಿದಂತೆ ಒಟ್ಟು 30 ಅಧಿಕಾರಿಗಳಿಗೆ ನಾಗರಿಕ ಪೊಲೀಸ್ ಅಧೀಕ್ಷಕ (ಎಸ್‌ಪಿ-ನಾನ್ ಐಪಿಎಸ್) ಹುದ್ದೆಗಳಿಗೆ ಮುಂಬಡ್ತಿ ನೀಡಲು ಡಿಪಿಸಿ 2023ರ ನವೆಂಬರ್ 15ರಂದು ಶಿಫಾರಸು ಮಾಡಿತ್ತು. ಆದರೆ ಸರ್ಕಾರವು ಅವರಿಗೆ ಪೂರ್ಣ ಪ್ರಮಾಣದ ಬಡ್ತಿ ನೀಡುವ ಬದಲಿಗೆ ಕೆಸಿಎಸ್‌ಆರ್ ನಿಯಮ 32ರ ಅನ್ವಯ ಎಸ್‌ಪಿಗಳಾಗಿ ಸ್ವತಂತ್ರ ಉಸ್ತುವಾರಿ ಹೊಣೆ ನೀಡಿ 2023ರ ನವೆಂಬರ್ 28ರಂದು ಆದೇಶ ಹೊರಡಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಅಧಿಕಾರಿಗಳು ಕೆಎಸ್‌ಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮಂಡಳಿಯು ಅಷ್ಟೂ ಅಧಿಕಾರಿಗಳಿಗೆ ಎಸ್‌ಪಿ ವೃಂದಕ್ಕೆ ಬಡ್ತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ಅಡ್ವೋಕೇಟ್ ಜನರಲ್ ಅವರು, ಉನ್ನತೀಕರಿಸಲಾದ ಹುದ್ದೆಗಳು ಕೇವಲ ಎರಡು ವರ್ಷಗಳ ಕಾಲ ಮಾತ್ರ ಲಭ್ಯವಿವೆ ಎಂದು ವಾದಿಸಿದ್ದರು. ಈ ಅಂಶವನ್ನು ಪರಿಗಣಿಸಿದ ಹೈಕೋರ್ಟ್, ಹುದ್ದೆಗಳ ಲಭ್ಯತೆಯ ಆಧಾರದ ಮೇಲೆ ನ್ಯಾಯಮಂಡಳಿಯ ಆದೇಶದಲ್ಲಿ ಅಲ್ಪ ಮಾರ್ಪಾಡು ಮಾಡಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿದೆ.

Category
ಕರಾವಳಿ ತರಂಗಿಣಿ