image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಮಾಜ ಪರಿವರ್ತನೆಗೆ ಶಿಕ್ಷಣ, ಸಂಘಟನೆ, ಹೋರಾಟಗಳೇ ತಳಹದಿ: ಡಾ. ಸಿ.ಟಿ. ರವಿ

ಸಮಾಜ ಪರಿವರ್ತನೆಗೆ ಶಿಕ್ಷಣ, ಸಂಘಟನೆ, ಹೋರಾಟಗಳೇ ತಳಹದಿ: ಡಾ. ಸಿ.ಟಿ. ರವಿ

​ಚಿಕ್ಕಮಗಳೂರು : ಸಮಾಜದ ಸರ್ವಾಂಗೀಣ ಪರಿವರ್ತನೆಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ. ಟಿ. ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಮಾಕಳಿಯಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಭಗವಾನ್ ಗೌತಮ ಬುದ್ಧ ಮತ್ತು ಡಾ. ಅಂಬೇಡ್ಕರ್ ಅವರ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಬುದ್ಧನ 'ಧಮ್ಮಂ ಶರಣಂ ಗಚ್ಚಾಮಿ' ಎಂಬ ಸಂದೇಶವು ಧರ್ಮಕ್ಕೆ ಶರಣಾಗುವುದನ್ನು ಸೂಚಿಸುತ್ತದೆ ಎಂದು ಅವರು ವಿವರಿಸಿದರು. ಸಂಘಟನೆ ಮತ್ತು ತತ್ವದ ಅರಿವು ಸಮಾಜ ನಿರ್ಮಾಣಕ್ಕೆ ಮುಖ್ಯವಾಗಿದ್ದು, ಅಂಬೇಡ್ಕರ್ ನೀಡಿದ 'ಶಿಕ್ಷಣ, ಸಂಘಟನೆ, ಹೋರಾಟ' ಎಂಬ ಮಂತ್ರವು ದುರ್ಬಲ ವರ್ಗಗಳಿಗೆ ಶಕ್ತಿ ನೀಡುವ ಸಾಧನವಾಗಿದೆ. ಶಿಕ್ಷಣವು ಸ್ವಾಭಿಮಾನ ಮತ್ತು ಸ್ವಾವಲಂಬನೆ ಬೆಳೆಸಿದರೆ, ಸಂಘಟನೆಯು ಬದಲಾವಣೆಗೆ ಸಹಕಾರಿಯಾಗುತ್ತದೆ ಮತ್ತು ಹೋರಾಟವು ಯಾವಾಗಲೂ ನ್ಯಾಯಕ್ಕಾಗಿ ಇರಬೇಕು ಎಂದು ರವಿ ಪ್ರತಿಪಾದಿಸಿದರು.  

​ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಲೋಕಸಭೆಗೆ ಬರದಂತೆ ತಡೆಯಲು ಕಾಂಗ್ರೆಸ್ ಪಿತೂರಿ ನಡೆಸಿತ್ತು ಎಂದು ಆರೋಪಿಸಿದರು. ಹಿಂದೂ ಕೋಡ್ ಬಿಲ್ ವಿಚಾರದಲ್ಲಿ ಅಂಬೇಡ್ಕರ್ ಅವರು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸ್ತಾಪದ ನಂತರವಷ್ಟೇ ಅವರಿಗೆ 'ಭಾರತ ರತ್ನ' ಲಭಿಸಿತು ಎಂದು ಅವರು ಸ್ಮರಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ ಎಂದು ರವಿ ತಿಳಿಸಿದರು. ಹಿಂದುತ್ವವು ಜಾತಿಯಲ್ಲ, ಅದು ದೇಶದ ಸಂಸ್ಕೃತಿಯ ಪ್ರತೀಕವಾಗಿದ್ದು, ಅಸ್ಪೃಶ್ಯತೆ ಮತ್ತು ಜಾತಿ ಭೇದಗಳನ್ನು ನಿವಾರಿಸಲು ಮನಸ್ಸಿನ ಮಟ್ಟದಲ್ಲಿ ಬದಲಾವಣೆ ಅಗತ್ಯವಿದೆ. ಧರ್ಮಗ್ರಂಥಗಳು ಎಲ್ಲಿಯೂ ಜಾತಿಯನ್ನು ಸಮರ್ಥಿಸಿಲ್ಲ, ಪರೋಪಕಾರವೇ ಪುಣ್ಯ ಹಾಗೂ ಪರಪೀಡನೆಯೇ ಪಾಪ ಎಂಬ ತತ್ವದಡಿ ಪ್ರತಿಯೊಬ್ಬರೂ ಬದಲಾವಣೆಗೆ ಮುಂದಾದಾಗ ಸಮಾಜ ಬೆಳಗುತ್ತದೆ ಎಂದು ಅವರು ಕರೆ ನೀಡಿದರು. ಈ ಸಮಾರಂಭದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಸಚಿವ ಎ. ನಾರಾಯಣಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  

Category
ಕರಾವಳಿ ತರಂಗಿಣಿ