ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಶಿವಮೊಗ್ಗ ಜಿಲ್ಲಾ ಘಟಕದ 2ನೇ ವಾರ್ಷಿಕೋತ್ಸವ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 03-05-2026ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಪ್ಯಾರಡೈಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ (ರಾಜು) ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ವಾರ್ಷಿಕೋತ್ಸವದ ಅಂಗವಾಗಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದೇ ಸಂದರ್ಭದಲ್ಲಿ ಅತ್ಯುತ್ತಮ ವರದಿಗಾರಿಕೆ ಮಾಡಿದ ಪತ್ರಕರ್ತರಿಗೆ, ಸಂಪಾದಕರಿಗೆ, ಪತ್ರಿಕಾ ವಿತರಕರ ಸಂಘದ ಮುಖ್ಯಸ್ಥರಿಗೆ, ಪ್ರಿಂಟರ್ಸ್ ಹಾಗೂ ಡಿಟಿಪಿ ಆಪರೇಟರ್‌ಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಸಿ.ವಿ. ರಾಘವೇಂದ್ರರಾವ್, ಕಾಮ್ರೇಡ್ ಲಿಂಗಪ್ಪ, ಛಾಯಾಗ್ರಾಹಕ ಶಿವಮೊಗ್ಗ ನಂದನ್, ಪಬ್ಲಿಕ್ ಟಿ.ವಿ. ವರದಿಗಾರ ಶಶಿಧರ, ಬಿ-ಟಿ.ವಿ. ವರದಿಗಾರ ಅನಿಲ್ ಮತ್ತು ಸಾಗರದ ಪತ್ರಕರ್ತ ಓಂಕಾರ್ ತಾಳಗುಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಜಗಳೂರು ಲಕ್ಷ್ಮಣರಾವ್ ಉದ್ಘಾಟಿಸಲಿದ್ದು, ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ (ರಾಜು) ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ಎಲ್ಲಾ ಸಮಾನ ಮನಸ್ಕ ಪತ್ರಕರ್ತರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಚಿತ್ರಪ್ಪ ಯರಬಾಳ, ಕೆ.ಎಂ.ಸತೀಶ್ ಗೌಡ, ಬಿ.ಸಿ.ಗಿರೀಶ್, ಬಿ.ಸಿ.ಶಿವರಾಜ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.