ಬೆಂಗಳೂರು : ಅತ್ಯಾಧುನಿಕ ಸೌಲಭ್ಯಗಳುಳ್ಳ ಮೆಗಾ ಕೃಷಿ ಮಾರುಕಟ್ಟೆ ಸ್ಥಾಪನೆಗೆ ಇದ್ದ ದಶಕಗಳ ಕಾನೂನು ಅಡೆತಡೆಗಳು ನಿವಾರಣೆಯಾಗಿದ್ದು, ಸುಪ್ರೀಂ ಕೋರ್ಟ್ ಸರ್ಕಾರದ ಪರವಾಗಿ ಮಹತ್ವದ ತೀರ್ಪು ನೀಡಿದೆ. ಈ ಕುರಿತು ಹರ್ಷ ವ್ಯಕ್ತಪಡಿಸಿದ ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು, 1994ರಿಂದ ನನೆಗುದಿಗೆ ಬಿದ್ದಿದ್ದ ಮಾಗಡಿ ರಸ್ತೆಯ ಶ್ರೀಗಂಧ ಕಾವಲ್ ಮತ್ತು ಹೇರೋಹಳ್ಳಿ ಗ್ರಾಮಗಳ ಸುಮಾರು 272.33 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕ್ರಮಬದ್ಧವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪೀಠವು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು. ಬೆಂಗಳೂರು ಉತ್ತರ ತಾಲೂಕಿನ ಈ ಭೂಮಿಯನ್ನು ವಶಕ್ಕೆ ಪಡೆಯಲು ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ ವಿರುದ್ಧ ಸುದೀರ್ಘ ಹೋರಾಟ ನಡೆಸಲಾಗಿತ್ತು. ಈ ಹಿಂದೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದ್ದರೂ, ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿದ ಪರಿಣಾಮಕಾರಿ ವಾದದಿಂದಾಗಿ ಇದೀಗ ಗೆಲುವು ಲಭಿಸಿದೆ.
ಈ ಯೋಜನೆಯೊಂದಿಗೆ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾರುಕಟ್ಟೆಯನ್ನು ಈಗಾಗಲೇ ಶಿಫ್ಟ್ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಒಟ್ಟಾರೆಯಾಗಿ 300 ಎಕರೆಗೂ ಹೆಚ್ಚು ಪ್ರೈಮ್ ಭೂಮಿ ಮಾರುಕಟ್ಟೆ ಸಮಿತಿಯ ವಶಕ್ಕೆ ಬಂದಂತಾಗಿದ್ದು, ರೈತರು, ವರ್ತಕರು ಮತ್ತು ಗ್ರಾಹಕರಿಗೆ ಒಂದೇ ಸೂರಿನಡಿ ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸುವ ಸರ್ಕಾರದ ಗುರಿ ಈಡೇರಲಿದೆ. ಇದರ ಜೊತೆಗೆ ಹುಲಿಮಂಗಲದ 42 ಎಕರೆ ಹಾಗೂ ಕಾರಟಗಿಯ 136 ಎಕರೆ ಭೂಸ್ವಾಧೀನ ಪ್ರಕರಣಗಳಲ್ಲೂ ಎಪಿಎಂಸಿಗೆ ಜಯ ಸಿಕ್ಕಿದ್ದು, ಒಟ್ಟು ಮೂರು ಪ್ರಮುಖ ಕಾನೂನು ಹೋರಾಟಗಳಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ತೀರ್ಪಿನಿಂದಾಗಿ ಬೆಂಗಳೂರಿನ ಕೃಷಿ ವಾಣಿಜ್ಯ ಕ್ಷೇತ್ರಕ್ಕೆ ಹೊಸ ಆಯಾಮ ದೊರೆಯಲಿದ್ದು, ರೈತರ ಆರ್ಥಿಕ ಪ್ರಗತಿಗೆ ದೊಡ್ಡ ಬಲ ಸಿಗಲಿದೆ ಎಂದು ಮೂಲಗಳಿಂದ ತಿಳುದುಬಂದಿದೆ.