image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿಗೆ ಡಬಲ್ ಡೆಕ್ಕರ್ ಹಾಗೂ ಮೇಲ್ಸೇತುವೆಗಳೇ ಆಸರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿಗೆ ಡಬಲ್ ಡೆಕ್ಕರ್ ಹಾಗೂ ಮೇಲ್ಸೇತುವೆಗಳೇ ಆಸರೆ: ಡಿಸಿಎಂ ಡಿ.ಕೆ. ಶಿವಕುಮಾರ್

​ಬೆಂಗಳೂರು : ನಗರದ ಸಂಚಾರ ದಟ್ಟಣೆ ನಿವಾರಣೆ ಮತ್ತು ಮೂಲಸೌಕರ್ಯ ವೃದ್ಧಿಸುವ ನಿಟ್ಟಿನಲ್ಲಿ ಡಬಲ್ ಡೆಕ್ಕರ್ ರಸ್ತೆಗಳು, ಸುಸಜ್ಜಿತ ಪಾರ್ಕಿಂಗ್ ಕಟ್ಟಡಗಳು, ಮೇಲ್ಸೇತುವೆ ಹಾಗೂ ಅಂಡರ್ ಪಾಸ್‌ಗಳ ನಿರ್ಮಾಣವು 'ಬ್ರ್ಯಾಂಡ್ ಬೆಂಗಳೂರು' ರೂಪಿಸಲು ಪೂರಕವಾಗಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಶುಕ್ರವಾರ ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಕಂಬಗಳಿಗೆ ಅಳವಡಿಸಲಾದ ಡೈನಾಮಿಕ್ ಲೈಟಿಂಗ್ ವ್ಯವಸ್ಥೆ, ಕೆ.ಆರ್. ಮಾರುಕಟ್ಟೆಯ ನೂತನ ಪಾರ್ಕಿಂಗ್ ಸಂಕೀರ್ಣ ಹಾಗೂ ಬನಶಂಕರಿ ಜಂಕ್ಷನ್‌ನಲ್ಲಿ ಸ್ಕೈವಾಕ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

​ಕೆ.ಆರ್. ಮಾರುಕಟ್ಟೆಯಲ್ಲಿ ಲೋಕಾರ್ಪಣೆಗೊಂಡ ಪಾರ್ಕಿಂಗ್ ಕಟ್ಟಡದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದ್ದು, ಸಾರ್ವಜನಿಕರಿಗೆ ಹೊರೆಯಾಗದಂತೆ ಶುಲ್ಕ ನಿಗದಿಪಡಿಸಲಾಗಿದೆ. ಮಾರುಕಟ್ಟೆಯ ಸುತ್ತಮುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆಬದಿ ವಾಹನ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ವಾಹನಗಳನ್ನು ಟೋಯಿಂಗ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಸಣ್ಣ ಜಾಗದಲ್ಲಿ ಹೆಚ್ಚು ವಾಹನಗಳನ್ನು ನಿಲ್ಲಿಸುವ ಆಧುನಿಕ ತಂತ್ರಜ್ಞಾನ ಬಳಕೆಗೆ ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಹೊಸ ನಿಯಮಗಳನ್ನು ಸರ್ಕಾರ ರೂಪಿಸುತ್ತಿದೆ ಎಂದು ವಿವರಿಸಿದರು.

​ನಗರದಲ್ಲಿ ಸುಮಾರು 44 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದ್ದು, ಭವಿಷ್ಯದಲ್ಲಿ ಮೆಟ್ರೋ ಮಾರ್ಗಗಳ ಜೊತೆಗೆ ಇಂತಹ ಯೋಜನೆಗಳನ್ನು ಸಂಯೋಜಿಸುವ ಆಲೋಚನೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದಂತೆ ಸುಮಾರು 138 ಕಿಲೋಮೀಟರ್ ಉದ್ದದ ಮೇಲ್ಸೇತುವೆ ಮತ್ತು ಅಂಡರ್ ಪಾಸ್ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಂಗಳೂರಿನ 1.40 ಕೋಟಿ ಜನಸಂಖ್ಯೆ ಮತ್ತು ಅಷ್ಟೇ ಪ್ರಮಾಣದ ವಾಹನಗಳ ಒತ್ತಡವನ್ನು ನಿಭಾಯಿಸಲು ಆಸ್ತಿಗಳ ನೆಲಸಮ ಪ್ರಕ್ರಿಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮೇಲ್ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಬನಶಂಕರಿ ಜಂಕ್ಷನ್‌ನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸ್ಕೈವಾಕ್ ನಿರ್ಮಿಸುವ ಮೂಲಕ ಪಾದಚಾರಿಗಳ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ