image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಪ್ಯಾರಾಮೆಡಿಕಲ್ ಕೋರ್ಸ್‌ ಪ್ರವೇಶಕ್ಕೆ ಹೈಕೋರ್ಟ್ ಹಸಿರು ನಿಶಾನೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಪ್ಯಾರಾಮೆಡಿಕಲ್ ಕೋರ್ಸ್‌ ಪ್ರವೇಶಕ್ಕೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು : ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹೈಕೋರ್ಟ್ ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. 2026-27ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರೆ ವೈದ್ಯಕೀಯ (ಪ್ಯಾರಾಮೆಡಿಕಲ್) ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ. ಕರ್ನಾಟಕ ಅರೆ ವೈದ್ಯಕೀಯ ಸಂಸ್ಥೆಗಳ ನಿರ್ವಹಣಾ ಸಂಘವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ.

​ನ್ಯಾಷನಲ್ ಹೆಲ್ತ್ ಪ್ರೊಫೆಷನ್ ಅಲೈಡ್ ಆಕ್ಟ್-2021ರ (ಎನ್‌ಸಿಎಎಚ್‌ಪಿ) ಅನ್ವಯ, ಪ್ಯಾರಾಮೆಡಿಕಲ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ ಎಂಬ ನಿಯಮವಿತ್ತು. ಈ ನಿಯಮದಿಂದಾಗಿ ಎಸ್‌ಎಸ್‌ಎಲ್‌ಸಿ ನಂತರ ನೇರವಾಗಿ ಪ್ಯಾರಾಮೆಡಿಕಲ್ ಸೇರಬಯಸುವ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಆದರೆ, ಈ ಕಾಯಿದೆಯು ಹಂತ ಹಂತವಾಗಿ ಜಾರಿಯಾಗುತ್ತಿರುವುದರಿಂದ ಮತ್ತು ಪ್ರಸ್ತುತ ಪಠ್ಯಕ್ರಮದ ಬದಲಾವಣೆಯ ಪ್ರಕ್ರಿಯೆ ನಡೆಯುತ್ತಿರುವುದರಿಂದ, ಹಳೆಯ ನಿಯಮದಂತೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.

​ಈ ಆದೇಶದ ಅನ್ವಯ, 2026-27ರ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪೂರೈಸಿದ ವಿದ್ಯಾರ್ಥಿಗಳು ಪ್ರಯೋಗಾಲಯ ತಂತ್ರಜ್ಞಾನ (DMLT), ಆಪ್ಟೋಮೆಟ್ರಿ ತಂತ್ರಜ್ಞಾನ, ಹೆಲ್ತ್ ಇನ್‌ಸ್ಪೆಕ್ಟರ್ ಮತ್ತು ಇಮೇಜಿಂಗ್ ತಂತ್ರಜ್ಞಾನ ಸೇರಿದಂತೆ ವಿವಿಧ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರ್ಪಡೆಗೊಳ್ಳಬಹುದಾಗಿದೆ. ರಾಜ್ಯದ ಸುಮಾರು 640ಕ್ಕೂ ಹೆಚ್ಚು ಅರೆ ವೈದ್ಯಕೀಯ ಕಾಲೇಜುಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ. ವೃತ್ತಿಪರ ಶಿಕ್ಷಣದ ಹಾದಿಯಲ್ಲಿ ಎಸ್‌ಎಸ್‌ಎಲ್‌ಸಿ ನಂತರ ತಕ್ಷಣವೇ ತಾಂತ್ರಿಕ ಕೌಶಲ ಕಲಿಯಲು ಬಯಸುವವರಿಗೆ ಈ ನ್ಯಾಯಾಂಗದ ಮಧ್ಯಸ್ಥಿಕೆ ಹೊಸ ಭರವಸೆ ಮೂಡಿಸಿದೆ.

Category
ಕರಾವಳಿ ತರಂಗಿಣಿ