image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಆಸಕ್ತಿ ತೋರದಿದ್ದರೆ, ಕಾನೂನು ಕ್ರಮ : ಸಚಿವ ಕೃಷ್ಣ ಬೈರೇಗೌಡ

ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಆಸಕ್ತಿ ತೋರದಿದ್ದರೆ, ಕಾನೂನು ಕ್ರಮ : ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಅರ್ಹ ಭೂಹೀನರಿಗೆ ಜಮೀನು ಮಂಜೂರು ಮಾಡಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ಸಕ್ರಮ ಯೋಜನೆಯ ಅಡಿ “ಬಗರ್ ಹುಕುಂ” ಅರ್ಜಿ ಆಹ್ವಾನಿಸಲಾಯಿತು. ಅಲ್ಲದೆ, ಕಳೆದ ಒಂದು ವರ್ಷದಿಂದ ಸ್ವತಃ ನಾನು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುತ್ತಾ, ಬಗರ್ ಹುಕುಂ ಸಂಬಂಧಿತ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೂ, ಕೆಲವು ಅಧಿಕಾರಿಗಳ ಕೆಲಸ ತೃಪ್ತಿಕರವಾಗಿಲ್ಲ. ಬಡವರ, ರೈತರ ಪರ ಕೆಲಸ ಮಾಡಲು ಅಸಡ್ಡೆ ತೋರುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.

ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಿದ ಅವರು, 'ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಈಗಲೂ ಮೀನಾಮೇಷ ಎಣಿಸುವುದು ಸರಿಯಲ್ಲ. ಹೀಗಾಗಿ ಎಲ್ಲಾ ತಹಶೀಲ್ದಾರರಿಗೆ ಅಕ್ಟೋಬರ್ ಹಾಗೂ ನವೆಂಬರ್ ಅಂತ್ಯದವರೆಗೆ ಎರಡು ತಿಂಗಳ ಗಡುವು ನೀಡುತ್ತಿದ್ದು, ಈ ಅವಧಿಯಲ್ಲೂ ಬಗರ್ ಹುಕುಂ ಅರ್ಜಿಗಳ ಸಮರ್ಪಕ ವಿಲೇವಾರಿ ಹಾಗೂ ಅರ್ಹ ರೈತರಿಗೆ ಭೂ ಮಂಜೂರು ಆಗದಿದ್ದರೆ, ಸಂಬಂಧಿತ ತಹಶೀಲ್ದಾರರಿಗೆ ನೋಟಿಸ್ ಜಾರಿಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ಬಗರ್ ಹುಕುಂ ಅರ್ಜಿ ವಿಲೇವಾರಿ ಮಾಡಲು ಅಧಿಕಾರಿಗಳಿಗಿರುವ ಸಮಸ್ಯೆ ಏನು? ಒಂದು ವರ್ಷದ ನಂತರವೂ ಅಧಿಕಾರಿಗಳು ಈ ಬಗ್ಗೆ ತಡ ಮಾಡುವುದರಲ್ಲಿ ಅರ್ಥವಿಲ್ಲ. ನಮೂನೆ 50, 53 ಮತ್ತು 57ರ ಅಡಿಯಲ್ಲಿ 14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅನರ್ಹ ಅರ್ಜಿಗಳೇ ಬಹುಪಾಲಿವೆ. ಹೀಗಾಗಿ ಅಧಿಕಾರಿಗಳು ತಮ್ಮ ವಿವೇಚನೆಯ ಮೇಲೆ ಅನರ್ಹ ಅರ್ಜಿಗಳನ್ನು ಅನೂರ್ಜಿತಗೊಳಿಸಿ, ಅರ್ಹರಿಗೆ ಶೀಘ್ರ ಜಮೀನು ಮಂಜೂರು ಮಾಡಬೇಕು. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಈ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದೇ ತಿಂಗಳ ಅಂತ್ಯದಲ್ಲಿ ಮತ್ತೊಂದು ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಈಗಾಗಲೇ ಕೆಲಸದ ಒತ್ತಡ ಹೆಚ್ಚಾಗಿದೆ. ಹೀಗಾಗಿ ಅವರನ್ನು ಅನಗತ್ಯವಾಗಿ ಫೀಲ್ಡ್​ಗೆ ಕಳುಹಿಸಬೇಡಿ ಎಂದು ತಹಶೀಲ್ದಾರರಿಗೆ ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದರು.

ಈಗಾಗಲೇ ಸಲ್ಲಿಕೆಯಾಗಿರುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ಅರ್ಜಿಗಳು ಯಾವುವು? ಅನರ್ಹ ಅರ್ಜಿಗಳು ಯಾವುವು? ಎಂದು ತಹಶೀಲ್ದಾರ್​ಗಳಿಗೆ ಪ್ರಾಥಮಿಕ ಪರಿಶೀಲನೆಯಲ್ಲೇ ತಿಳಿಯುತ್ತದೆ. ಹೀಗಾಗಿ ಈ ಕೆಲಸವನ್ನು ಅಧಿಕಾರಿಗಳು ಕಚೇರಿಯಲ್ಲೇ ಮುಗಿಸಿ. ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅವರಿಗೆ ಅನಗತ್ಯವಾಗಿ ಕೆಲಸ ನೀಡಬೇಡಿ. ಅನರ್ಹ ಅರ್ಜಿಗಳ ಪರಿಶೀಲನೆಗಾಗಿ ಅವರನ್ನು ಫೀಲ್ಡ್​ಗೆ ಕಳುಹಿಸಬೇಡಿ” ಎಂದು ತಾಕೀತು ಮಾಡಿದರು.

Category
ಕರಾವಳಿ ತರಂಗಿಣಿ