image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಒಳಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ಐತಿಹಾಸಿಕ ತೀರ್ಮಾನ: ರೋಸ್ಟರ್ ಬಿಂದು 400ಕ್ಕೆ ಏರಿಕೆ, 56,432 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ

ಒಳಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ಐತಿಹಾಸಿಕ ತೀರ್ಮಾನ: ರೋಸ್ಟರ್ ಬಿಂದು 400ಕ್ಕೆ ಏರಿಕೆ, 56,432 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯು ಗುರುವಾರ ಅತ್ಯಂತ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಪರಿಶಿಷ್ಟ ಜಾತಿಯ 15% ಮೀಸಲಾತಿಯಲ್ಲಿ ಹಕ್ಕು ಹಂಚಿಕೆ ಮಾಡಲು ಪ್ರಸ್ತುತ ಚಾಲ್ತಿಯಲ್ಲಿರುವ 100 ಬಿಂದುಗಳ ರೋಸ್ಟರ್ ಪದ್ಧತಿಯನ್ನು 400ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಸದ್ಯದ ನಿಯಮದಂತೆ ಎಡಗೈ ಸಮುದಾಯಕ್ಕೆ 5.25%, ಬಲಗೈ ಸಮುದಾಯಕ್ಕೆ 5.25% ಹಾಗೂ ಸ್ಪರ್ಶ್ಯ ಮತ್ತು ಅಲೆಮಾರಿ ಸಮುದಾಯಗಳಿಗೆ 4.5% ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ. ಆದರೆ, 100 ಬಿಂದುಗಳ ರೋಸ್ಟರ್‌ನಲ್ಲಿ 5.25% ನಂತಹ ದಶಮಾಂಶ ಅಂಕಿಗಳ ಅನ್ವಯ ಹುದ್ದೆ ಹಂಚಿಕೆ ಮಾಡುವುದು ತಾಂತ್ರಿಕವಾಗಿ ಅಸಾಧ್ಯವಾಗಿತ್ತು. ಉದಾಹರಣೆಗೆ, 100 ಹುದ್ದೆಗಳಲ್ಲಿ 5.25 ಹುದ್ದೆಗಳನ್ನು ನೀಡಲು ಬರುವುದಿಲ್ಲ; ನಾಲ್ಕು ಬಾರಿ ನೇಮಕಾತಿ ನಡೆದಾಗ ಮಾತ್ರ ಅದು ಒಂದು ಪೂರ್ಣ ಹುದ್ದೆಯಾಗುತ್ತದೆ. ಈ ಬಿಕ್ಕಟ್ಟನ್ನು ಹೋಗಲಾಡಿಸಲು ರೋಸ್ಟರ್ ಬಿಂದುವನ್ನು 400ಕ್ಕೆ ಏರಿಸಲಾಗಿದ್ದು, ಇದರಿಂದ 400 ಹುದ್ದೆಗಳ ಪೈಕಿ 5.25% ಅಂದರೆ ನಿಖರವಾಗಿ 21 ಹುದ್ದೆಗಳನ್ನು ಹಂಚಿಕೆ ಮಾಡಲು ಸಾಧ್ಯವಾಗಲಿದೆ.

​ಈ ಐತಿಹಾಸಿಕ ಬದಲಾವಣೆಯ ಹಿನ್ನೆಲೆಯಲ್ಲಿ, ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 56,432 ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ತುರ್ತು ಕ್ರಮ ಕೈಗೊಳ್ಳಲು ಸಂಪುಟ ನಿರ್ಧರಿಸಿದೆ. ಮಾರ್ಚ್ 2025ರ ನಂತರ ಒಳಮೀಸಲಾತಿ ಅಳವಡಿಸದೆ ಹೊರಡಿಸಲಾಗಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮುಗಿದಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದವಕ್ಕೆ ಪರಿಷ್ಕೃತ ಅಧಿಸೂಚನೆ ಹೊರಡಿಸಲು ಆದೇಶಿಸಲಾಗಿದೆ. ಅಲ್ಲದೆ, ಫೆಬ್ರವರಿ 2026ರಲ್ಲಿ ಹೊರಡಿಸಲಾಗಿದ್ದ ಹಳೆಯ ಅಧಿಸೂಚನೆಗಳನ್ನು ರದ್ದುಪಡಿಸಿ ಹೊಸದಾಗಿ ಒಳಮೀಸಲಾತಿ ಸಹಿತ ಅಧಿಸೂಚನೆ ಹೊರಡಿಸಲಾಗುವುದು. ಮುಂದಿನ ದಿನಗಳಲ್ಲಿ ನ್ಯಾಯಾಲಯವು ಎಸ್.ಸಿ/ಎಸ್.ಟಿ ಮೀಸಲಾತಿಯನ್ನು 24%ಕ್ಕೆ ಹೆಚ್ಚಿಸಿರುವುದನ್ನು ಎತ್ತಿಹಿಡಿದಲ್ಲಿ, ಹೆಚ್ಚುವರಿ 6% ಹುದ್ದೆಗಳನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಿ ಭರ್ತಿ ಮಾಡಲು ಸರ್ಕಾರ ಸಜ್ಜಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಮನ್ವಯದೊಂದಿಗೆ ಈ ಹೊಸ 400 ಬಿಂದುಗಳ ರೋಸ್ಟರ್ ಸಿದ್ಧಪಡಿಸಲು ಸಂಪುಟ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಈ ತೀರ್ಮಾನವು ರಾಜ್ಯದ ದಲಿತ ಸಮುದಾಯಗಳ ದಶಕಗಳ ಬೇಡಿಕೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯೆಂದು ಪರಿಗಣಿತವಾಗಿದೆ.

Category
ಕರಾವಳಿ ತರಂಗಿಣಿ