image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಿಪಿಇ ಕಿಟ್ ಹಗರಣ: ಆರೋಪಿಗಳ ವಿರುದ್ಧದ ಮಧ್ಯಂತರ ತಡೆ ತೆರವುಗೊಳಿಸಲು ಹೈಕೋರ್ಟ್ ನಿರಾಕರಣೆ

ಪಿಪಿಇ ಕಿಟ್ ಹಗರಣ: ಆರೋಪಿಗಳ ವಿರುದ್ಧದ ಮಧ್ಯಂತರ ತಡೆ ತೆರವುಗೊಳಿಸಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಪಿಪಿಇ ಕಿಟ್ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ 167 ಕೋಟಿ ರೂ. ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ, ಆರೋಪಿತ ಕಂಪನಿಗಳ ವಿರುದ್ಧದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಹಗರಣದ ಆರೋಪ ಎದುರಿಸುತ್ತಿರುವ ಲಾಜ್ ಎಕ್ಸ್‌ಪೋರ್ಟ್ ಲಿಮಿಟೆಡ್ ಹಾಗೂ ಪ್ರೂಡೆಂಟ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ ಕಂಪನಿಗಳ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಮತ್ತು ದೋಷಾರೂಪ ಪಟ್ಟಿ ಸಲ್ಲಿಸದಂತೆ ಈ ಹಿಂದೆ ನೀಡಲಾಗಿದ್ದ ಆದೇಶವು ಮುಂದುವರಿಯಲಿದೆ.

​ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಲೆಕ್ಕಾಧಿಕಾರಿ ಡಾ. ವಿಷ್ಣುಪ್ರಸಾದ್ ಅವರು 2024ರ ಡಿಸೆಂಬರ್ 12ರಂದು ನೀಡಿದ್ದ ದೂರಿನನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತು.

​ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, "ಇದು ಕೋಟ್ಯಂತರ ರೂಪಾಯಿ ಹಣ ದುರುಪಯೋಗದ ಗಂಭೀರ ಪ್ರಕರಣವಾಗಿದೆ. ಪಿಪಿಇ ಕಿಟ್ ಪೂರೈಕೆಯಾಗದಿರುವುದು ತನಿಖೆಯಲ್ಲಿ ಸಾಬೀತಾಗಿದೆ ಮತ್ತು ತನಿಖೆಯು ಬಹುತೇಕ ಪೂರ್ಣಗೊಂಡಿದೆ. ಆದ್ದರಿಂದ ತನಿಖೆ ಮುಂದುವರಿಸಲು ಅನುಕೂಲವಾಗುವಂತೆ ಮಧ್ಯಂತರ ಆದೇಶವನ್ನು ತೆರವುಗೊಳಿಸಬೇಕು" ಎಂದು ಮನವಿ ಮಾಡಿದರು. ಆದರೆ ಇದಕ್ಕೆ ಸಮ್ಮತಿಸದ ನ್ಯಾಯಪೀಠವು, ಇದೇ ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಅರ್ಜಿ ವಿಚಾರಣಾ ಹಂತದಲ್ಲಿದ್ದು, ಒಂದು ವೇಳೆ ಈಗ ತನಿಖೆಗೆ ಅವಕಾಶ ನೀಡಿದರೆ ಅದು ಮತ್ತೊಂದು ಪ್ರಕರಣದ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿತು. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ನಡೆದ ಈ ಅಕ್ರಮದ ಕುರಿತಾದ ಕಾನೂನು ಹೋರಾಟ ಈಗ ಕುತೂಹಲ ಕೆರಳಿಸಿದೆ.

Category
ಕರಾವಳಿ ತರಂಗಿಣಿ