image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

8 ಜಿಲ್ಲಾ ಪಂಚಾಯಿತಿಗಳ ಗಡಿ ಪುನರ್‌ ವಿಂಗಡಣೆ: ಸರ್ಕಾರದ ಅಧಿಸೂಚನೆ

8 ಜಿಲ್ಲಾ ಪಂಚಾಯಿತಿಗಳ ಗಡಿ ಪುನರ್‌ ವಿಂಗಡಣೆ: ಸರ್ಕಾರದ ಅಧಿಸೂಚನೆ

​ಬೆಂಗಳೂರು: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಹಾಸನ, ಉತ್ತರ ಕನ್ನಡ, ಯಾದಗಿರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿಗಳನ್ನು ಗುರುತಿಸಿ ಹಾಗೂ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆಯು ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿರುವುದು ಹಾಗೂ ಕಂದಾಯ ಇಲಾಖೆಯು ಮಾಗಡಿ ಮತ್ತು ನೆಲಮಂಗಲ ತಾಲ್ಲೂಕುಗಳ ಭೌಗೋಳಿಕ ಗಡಿಗಳನ್ನು ಪುನರ್ ರಚಿಸಿರುವುದು ಈ ಕ್ಷೇತ್ರ ಪುನರ್ ವಿಂಗಡಣೆಗೆ ಪ್ರಮುಖ ಕಾರಣವಾಗಿದೆ.

​ಹೊಸ ಅಧಿಸೂಚನೆಯ ಪ್ರಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 28 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹೊಸಕೋಟೆಯಲ್ಲಿ 8, ದೇವನಹಳ್ಳಿಯಲ್ಲಿ 7, ದೊಡ್ಡಬಳ್ಳಾಪುರದಲ್ಲಿ 7 ಮತ್ತು ನೆಲಮಂಗಲದಲ್ಲಿ 6 ಕ್ಷೇತ್ರಗಳಿವೆ. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸಲಾಗಿದ್ದು, ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಡಿಯಲ್ಲಿ ಬರುವ ಗ್ರಾಮಗಳ ವಿವರವಾದ ಪಟ್ಟಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

​ಇದೇ ವೇಳೆ, ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವು ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2ರ ಸಂಜೆ 5.30ರವರೆಗೆ ವಿಸ್ತರಿಸಿದೆ. ಈ ಕುರಿತು ಬಂದಿರುವ ಆಕ್ಷೇಪಣೆ ಮತ್ತು ಅಹವಾಲುಗಳ ಪರಿಶೀಲನೆಗೆ ಏಪ್ರಿಲ್ 27 ರಂದು ನಿಗದಿಯಾಗಿದ್ದ ಅದಾಲತ್ತನ್ನು ಮೇ 5ಕ್ಕೆ ಮುಂದೂಡಲಾಗಿದೆ. ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಚೇರಿಯಲ್ಲಿ ಈ ಅದಾಲತ್ ನಡೆಯಲಿದೆ.

​ಮೇ 5ರಂದು ನಡೆಯುವ ಅದಾಲತ್‌ನಲ್ಲಿ ಬೆಳಿಗ್ಗೆ 11ರಿಂದ 1.30ರವರೆಗೆ ಕಲಬುರಗಿ, ಯಾದಗಿರಿ, ಬೀದ‌ರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಗಳ ಅಹವಾಲುಗಳನ್ನು ಪರಿಶೀಲಿಸಲಾಗುವುದು. ಮಧ್ಯಾಹ್ನ 2:30 ರಿಂದ 5ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ದಾವಣಗೆರೆ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದ ಅದಾಲತ್ ನಡೆಯಲಿದೆ.

Category
ಕರಾವಳಿ ತರಂಗಿಣಿ