ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಮತ್ತು ಅವರನ್ನು ಯಾವುದೇ ಕಾರಣಕ್ಕೂ ಕಚೇರಿಯೊಳಗೆ ಬಿಟ್ಟುಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಹಾಗೂ ನೂತನ ಕೊಠಡಿಗಳನ್ನು ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಡತಗಳ ವಿಲೇವಾರಿಯಲ್ಲಿ ವಿಳಂಬ ನೀತಿ ಅನುಸರಿಸುವುದು ಭ್ರಷ್ಟಾಚಾರಕ್ಕೆ ದಾರಿಯಾಗುತ್ತದೆ, ಆದ್ದರಿಂದ ಅಧಿಕಾರಿಗಳು ಶೀಘ್ರವಾಗಿ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದ ದಕ್ಷ ಆಡಳಿತವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಕೆಎಎಸ್ ಅಧಿಕಾರಿಗಳ ಸಂಘಕ್ಕೆ ನೂರು ವರ್ಷಗಳ ಸುದೀರ್ಘ ಇತಿಹಾಸವಿದೆ ಎಂದು ತಿಳಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗ ಎರಡೂ ಜನಪ್ರತಿನಿಧಿಗಳಂತೆ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳಿಗೆ ಕೇವಲ ಕಾನೂನಿನ ಅರಿವಿದ್ದರೆ ಸಾಲದು, ಸಮಾಜದ ಬಗ್ಗೆ ಕಾಳಜಿ ಮತ್ತು ಸಾಮಾನ್ಯ ಜ್ಞಾನವೂ ಇರಬೇಕು. ಅಸಮಾನತೆಯ ಸಮಾಜದಲ್ಲಿ ದುರ್ಬಲ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವುದು ಅಧಿಕಾರಿಗಳ ಆದ್ಯತೆಯಾಗಬೇಕು ಎಂದು ಅವರು ಪ್ರತಿಪಾದಿಸಿದರು. ಗ್ರಾಮೀಣ ಜನರ ಸಮಸ್ಯೆಗಳನ್ನು ಪ್ರೀತಿಯಿಂದ ಆಲಿಸಿ ಬಗೆಹರಿಸಿದರೆ, ಅವರು ನಿಮ್ಮ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಸಿಎಂ ಅಭಿಪ್ರಾಯಪಟ್ಟರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ತಲುಪಿಸುತ್ತಿವೆ ಎಂದು ತಿಳಿಸಿದ ಸಿದ್ದರಾಮಯ್ಯ ಅವರು, ಸರ್ಕಾರದ ನೀತಿಗಳನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳ ಪಾತ್ರ ಅತಿ ದೊಡ್ಡದು ಎಂದರು. ಇದೇ ಸಂದರ್ಭದಲ್ಲಿ ಕೆಎಎಸ್ ಅಧಿಕಾರಿಗಳ ಪದೋನ್ನತಿ ಕುರಿತು ಮಾತನಾಡಿದ ಅವರು, ಕಂದಾಯ ಸಚಿವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಶೀಘ್ರದಲ್ಲೇ ಬಡ್ತಿ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ, ಶೇ. 33ರಷ್ಟು ಅಧಿಕಾರಿಗಳಿಗೆ ಸಿಇಒಗಳಾಗಿ ಬಡ್ತಿ ನೀಡುವ ಭರವಸೆಯನ್ನೂ ನೀಡಿದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೆಎಎಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.